ಕುಡಿಯಲು ಹಣ ಕೊಟ್ಟಿಲ್ಲ ಅಂತ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮಗ
ಮದ್ಯ ಸೇವನೆಗೆ ಹಣ ಕೇಳಿದಾಗ ನಿರಾಕರಿಸಿದ್ದಕ್ಕೆ ವೃದ್ಧ ತಾಯಿಯ ಮೇಲೆ ಮಗ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದು, ಗ್ರಾಮಸ್ಥರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ದಾವಣಗೆರೆ (Davanagere): ಹತ್ತು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ ತಾಯಿಯೊಬ್ಬರು ಕೊನೆಗೆ ಸ್ವಂತ ಮಗನಿಂದಲೇ ಪ್ರಾಣ ಕಳೆದುಕೊಂಡಿದ್ದಾರೆ. ಮದ್ಯ ಸೇವನೆಗೆ ಹಣ ನೀಡಲು ನಿರಾಕರಿಸಿದ್ದಕ್ಕೆ ಮಗ ದೊಣ್ಣೆಯಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.
ಮೃತರನ್ನು 70 ವರ್ಷದ ಬುಳ್ಳಮ್ಮ ಎಂದು ಗುರುತಿಸಲಾಗಿದೆ. 35 ವರ್ಷದ ಮಗ ಹನುಮಂತಪ್ಪ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಪತಿ ಮೃತಪಟ್ಟ ಬಳಿಕ ಒಂಬತ್ತು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಸಾಕಿ ಬೆಳೆಸಿದ್ದ ಬುಳ್ಳಮ್ಮ, ಮಗನ ಮೇಲೂ ಅಪಾರ ಪ್ರೀತಿ ಹೊಂದಿದ್ದರು. ಆದರೆ ಆತನ ಹಿಂದಿನ ಅಪರಾಧ ಪ್ರಕರಣಗಳಿಂದ ಕುಟುಂಬಕ್ಕೆ ಹಲವು ಸಂಕಷ್ಟಗಳು ಎದುರಾಗಿದ್ದವು.
ಹಣದ ವಿಚಾರವಾಗಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಪ್ರಕರಣದಲ್ಲಿ ಹನುಮಂತಪ್ಪ ಏಳು ವರ್ಷ ಜೈಲಿನಲ್ಲಿದ್ದ ಎನ್ನಲಾಗಿದೆ. ಬಳಿಕ ಸಹೋದರಿಯರು ಸುಮಾರು 10 ಲಕ್ಷ ರೂಪಾಯಿ ಖರ್ಚು ಮಾಡಿ ಮೂರು ತಿಂಗಳ ಹಿಂದೆ ಆತನನ್ನು ಜಾಮೀನಿನ ಮೇಲೆ ಹೊರಗೆ ಕರೆತಂದಿದ್ದರು. ಇತ್ತೀಚೆಗೆ ದಾವಣಗೆರೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಆತ, ತಾಯಿಯನ್ನು ನೋಡಲು ದೊಡ್ಡಘಟ್ಟಕ್ಕೆ ಬಂದಿದ್ದ.
ಬುಳ್ಳಮ್ಮ ಎರಡು ದಿನಗಳ ಹಿಂದೆ 6 ಸಾವಿರ ರೂಪಾಯಿ ಹಣವನ್ನು ಪಡೆದಿಟ್ಟುಕೊಂಡಿರುವ ವಿಚಾರ ಹನುಮಂತಪ್ಪನಿಗೆ ತಿಳಿದಿತ್ತು. ಆತ ಮದ್ಯ ಸೇವಿಸಿ ಮನೆಗೆ ಬಂದು ಹಣ ಕೇಳಿದ್ದಾನೆ. ಕುಡಿತಕ್ಕೆ ಹಣ ನೀಡಲು ತಾಯಿ ನಿರಾಕರಿಸಿದ್ದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕೋಪಗೊಂಡ ಹನುಮಂತಪ್ಪ ದೊಣ್ಣೆಯಿಂದ ತಾಯಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಮೃತದೇಹವನ್ನು ಬೆಡ್‌ಶೀಟ್‌ನಿಂದ ಮುಚ್ಚಿಟ್ಟಿದ್ದಾನೆ.
ತಾಯಿಯನ್ನು ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ಹೋದ ತಮ್ಮ ಇನ್ನೂ ವಾಪಸ್ ಬರದಿದ್ದರಿಂದ ಅನುಮಾನಗೊಂಡ ಅಕ್ಕ ಶಾರದಮ್ಮ ಮನೆಗೆ ತೆರಳಿದ್ದಾರೆ. ಅಲ್ಲಿ ಬುಳ್ಳಮ್ಮ ಮೃತಪಟ್ಟಿರುವುದು ಕಂಡು ಘಟನೆ ಬೆಳಕಿಗೆ ಬಂದಿದೆ. ಗ್ರಾಮಸ್ಥರ ನೆರವಿನಿಂದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಮಾಹಿತಿ ತಿಳಿದು ಬಸವಪಟ್ಟಣ ಪೊಲೀಸ್ ಠಾಣೆಯ ಸಿಪಿಐ ಮಲ್ಲಮ್ಮ ಚೌಬೇ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.
ನಾಳೆಯ ದಿನ ಭವಿಷ್ಯ: 14-11-2026, ಶನಿವಾರ
Read the story
ಚಿನ್ನದ ಬೆಲೆ ಮತ್ತೆ ಕುಸಿತ; ಮಹಿಳೆಯರಿಗೆ ಬಂಪರ್ ಸುದ್ದಿ
Read the story
ಸ್ವಂತ ಫಾಸ್ಟ್ ಫುಡ್ ಸೆಂಟರ್ ಶುರು ಮಾಡಬೇಕಾ? ಇಲ್ಲಿದೆ ಉಚಿತ ತರಬೇತಿ
Read the story
ಡಾ.ರಾಜ್ ಕುಮಾರ್ ರನ್ನು ಸ್ಮರಿಸಿದ ಪ್ರಧಾನಿ ಮೋದಿ
Read the story
ಫ್ಯಾಮಿಲಿಗೆ ಬೆಸ್ಟ್, 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಕಾರುಗಳು ಇವು
Read the story



