ಬೆಂಗಳೂರು: ದಕ್ಷಿಣ ಕರ್ನಾಟಕ ದೇವಾಲಯಗಳಿಗೆ 4 ದಿನಗಳ ವಿಶೇಷ ಟೂರ್ ಪ್ಯಾಕೇಜ್! ಇಲ್ಲಿದೆ ಡೀಟೇಲ್ಸ್
ಬೆಂಗಳೂರು ಮೂಲದ ಭಕ್ತರು ಮತ್ತು ಪ್ರವಾಸಿಗರಿಗಾಗಿ ದಕ್ಷಿಣ ಕರ್ನಾಟಕದ ಪ್ರಮುಖ ಸುಕ್ಷೇತ್ರಗಳಿಗೆ ನಾಲ್ಕು ದಿನಗಳ ವಿಶೇಷ ಟೂರ್ ಪ್ಯಾಕೇಜ್ ಅನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರಕಟಿಸಿದ್ದು ದರ್ಶನ ವಸತಿ ಊಟ ವ್ಯವಸ್ಥೆ ಒಳಗೊಂಡಿದೆ.

- ದಕ್ಷಿಣ ಕರ್ನಾಟಕ ದೇವಾಲಯಗಳಿಗೆ ವಿಶೇಷ ಟೂರ್ ಪ್ಯಾಕೇಜ್
- ಬೆಂಗಳೂರಿನಿಂದ ಎಸಿ ಡಿಲಕ್ಸ್ ಬಸ್ ಪ್ರಯಾಣ ವ್ಯವಸ್ಥೆ
- ನಾಲ್ಕು ದಿನ ನಾಲ್ಕು ರಾತ್ರಿ ದರ್ಶನ ಮತ್ತು ವಸತಿ ಸೌಲಭ್ಯ
ಬೆಂಗಳೂರು (Bengaluru): ದಕ್ಷಿಣ ಕರ್ನಾಟಕದ (South Karnataka) ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಯೋಜಿಸುತ್ತಿರುವ ಭಕ್ತರಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಸಂತಸದ ಸುದ್ದಿ ಬಂದಿದೆ.
ಬೆಂಗಳೂರಿನಿಂದಲೇ ಆರಂಭವಾಗುವ ವಿಶೇಷ ದೇವಾಲಯ ಪ್ರವಾಸ ಪ್ಯಾಕೇಜ್ (Tour Package) ಅನ್ನು ಇಲಾಖೆ ಘೋಷಿಸಿದ್ದು, ಇದು ಭಕ್ತರಿಗೆ ಸುಲಭ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣ ಅನುಭವ ನೀಡಲಿದೆ.
ಈ ಟೂರ್ ಪ್ಯಾಕೇಜ್ ನಾಲ್ಕು ದಿನ ಮತ್ತು ನಾಲ್ಕು ರಾತ್ರಿ ಅವಧಿಯದ್ದಾಗಿದ್ದು, ವಾರದಲ್ಲಿ ಎರಡು ದಿನಗಳು ಬೆಂಗಳೂರಿನಿಂದ ಹೊರಡಲಿದೆ. ಯಶವಂತಪುರದ ಪ್ರವಾಸೋದ್ಯಮ ಇಲಾಖೆ ಕಚೇರಿ ಹಾಗೂ ಬಿಎಂಟಿಸಿ ಬಸ್ ನಿಲ್ದಾಣದಿಂದ ಬುಧವಾರ ಮತ್ತು ಗುರುವಾರ ರಾತ್ರಿ 9 ಗಂಟೆಗೆ ಎಸಿ ಡಿಲಕ್ಸ್ ಬಸ್ ಪ್ರಯಾಣ ಆರಂಭವಾಗುತ್ತದೆ.
ಯಾವೆಲ್ಲ ಸುಕ್ಷೇತ್ರಗಳಿಗೆ ಭೇಟಿ?
ಈ ಪ್ಯಾಕೇಜ್ ಮೂಲಕ ಹೊರನಾಡು, ಕಳಸ, ಶೃಂಗೇರಿ, ಕೊಲ್ಲೂರು, ಮುರುಡೇಶ್ವರ, ಉಡುಪಿ, ಕಟೀಲ್, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಕರ್ನಾಟಕ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಲಾಗುತ್ತದೆ. ಪ್ರತಿಯೊಂದು ಸ್ಥಳದಲ್ಲೂ ಭಕ್ತರಿಗೆ ದರ್ಶನ ಮತ್ತು ಸ್ಥಳ ವೀಕ್ಷಣೆಗೆ ಸಮರ್ಪಕ ಸಮಯ ಮೀಸಲಿಡಲಾಗಿದೆ.
ವಸತಿ ಮತ್ತು ಊಟ ವ್ಯವಸ್ಥೆ:
ಪ್ರವಾಸಿಗರಿಗೆ ಹೋಟೆಲ್ ಹುಡುಕುವ ತೊಂದರೆ ತಪ್ಪಿಸುವ ಉದ್ದೇಶದಿಂದ, ಪ್ರವಾಸದ ಅವಧಿಯಲ್ಲೇ ನಿಗದಿತ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರನಾಡಿನಲ್ಲಿ ಫ್ರೆಶ್ ಅಪ್ ವ್ಯವಸ್ಥೆ, ಕೊಲ್ಲೂರು ಮತ್ತು ಕಟೀಲ್‌ನಲ್ಲಿ ರಾತ್ರಿ ವಾಸ್ತವ್ಯ, ಜೊತೆಗೆ ಆಯ್ದ ಸ್ಥಳಗಳಲ್ಲಿ ಉಪಹಾರ ಮತ್ತು ಊಟ ವ್ಯವಸ್ಥೆ ಇರುತ್ತದೆ.
ಪ್ರಯಾಣದ ಮುಖ್ಯ ವೇಳಾಪಟ್ಟಿ:
ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ ಬೆಳಿಗ್ಗೆ ಹೊರನಾಡು ತಲುಪುತ್ತದೆ. ಅನ್ನಪೂರ್ಣೇಶ್ವರಿ ದೇವಿಯ ದರ್ಶನದಿಂದ ಆರಂಭವಾಗುವ ಪ್ರವಾಸದಲ್ಲಿ ಕಳಸೇಶ್ವರ, ಶೃಂಗೇರಿ ಶಾರದಾಂಬೆ, ಕೊಲ್ಲೂರು ಮೂಕಾಂಬಿಕೆ, ಮುರುಡೇಶ್ವರ, ಉಡುಪಿ ಶ್ರೀಕೃಷ್ಣ, ಕಟೀಲ್ ದುರ್ಗಾ ಪರಮೇಶ್ವರಿ, ಮಂಗಳೂರು ಮಂಗಳಾದೇವಿ, ಧರ್ಮಸ್ಥಳ ಮಂಜುನಾಥೇಶ್ವರ ಮತ್ತು ಕುಕ್ಕೆ ಸುಬ್ರಹ್ಮಣ್ಯ ದರ್ಶನ ಸೇರಿವೆ. ಐದನೇ ದಿನ ಬೆಳಗ್ಗೆ ಪ್ರವಾಸ ಮುಕ್ತಾಯಗೊಳ್ಳುತ್ತದೆ.
ಟಿಕೆಟ್ ದರ ವಿವರ:
ಏಕ ಆಕ್ಯುಪೆನ್ಸಿ – ₹9,230
ಡಬಲ್ ಆಕ್ಯುಪೆನ್ಸಿ – ₹7,030
ಟ್ರಿಪಲ್ ಆಕ್ಯುಪೆನ್ಸಿ – ₹6,480
ಬುಕ್ಕಿಂಗ್ ವಿಧಾನ:
ಈ ಟೂರ್ ಪ್ಯಾಕೇಜ್‌ಗೆ ಎಲ್‌ಟಿಸಿ ಸೌಲಭ್ಯವೂ ಲಭ್ಯವಿದೆ. ವೃತ್ತಿಪರ ಮಾರ್ಗದರ್ಶಕರು ಪ್ರವಾಸದ ಪೂರ್ಣ ಅವಧಿಯಲ್ಲಿ ಜೊತೆಗಿರುತ್ತಾರೆ. ಆಸಕ್ತರು ಅಧಿಕೃತ ಜಾಲತಾಣದಲ್ಲಿ (https://kstdc.co/tour_packages/south-karnataka-temple-tour/) ಬುಕ್ ಮಾಡಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ 80-4334-4334 ಸಂಖ್ಯೆಯನ್ನು ಸಂಪರ್ಕಿಸಬಹುದು.




