ಶಿವಮೊಗ್ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಲೆ! ಇಬ್ಬರು ವಿದ್ಯಾರ್ಥಿಗಳು ವಶಕ್ಕೆ
ಸೂಳೆಬೈಲು ಬಡಾವಣೆಯಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಹೊರಟಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ (16) ಮೇಲೆ ಸಹಪಾಠಿಗಳಿಂದ ಹಲ್ಲೆ ನಡೆದಿದ್ದು, ಎದೆಯ ಮೇಲೆ ಬಲವಾದ ಹೊಡೆತದಿಂದ ಕುಸಿದು ಬಿದ್ದ ಆತ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದಾನೆ.

- ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಲೆ
- ಸ್ಪೆಷಲ್ ಕ್ಲಾಸ್ ಬಳಿಕ ನಡೆದ ಜಗಳ
- ಬಿಡಿಸಲು ಹೋದ ಸಂಕೇತ್ ಮೇಲೆ ಹಲ್ಲೆ
ಶಿವಮೊಗ್ಗ ನಗರದ (Shivamogga) ಸೂಳೆಬೈಲು ಬಡಾವಣೆಯಲ್ಲಿ ನಡೆದ ದುರಂತ ಘಟನೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂಕೇತ್ (16) ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿಕೊಂಡು ಹೊರಬರುತ್ತಿದ್ದಾಗ ಕೆಲವು ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆಯುತ್ತಿತ್ತು.
ಅವರನ್ನು ಸಮಾಧಾನಪಡಿಸಲು ಮುಂದಾದ ಸಂಕೇತ್ ಮೇಲೆಯೇ ನಾಲ್ವರು ವಿದ್ಯಾರ್ಥಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಎದೆಯ ಭಾಗಕ್ಕೆ ಬಲವಾದ ಹೊಡೆತ ಬಿದ್ದ ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ನೆಲಕ್ಕುಸಿದಿದ್ದಾನೆ.
ಆಸ್ಪತ್ರೆಗೆ ಸಾಗಿಸುವಾಗಲೇ ಮರಣ
ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗ ಮಧ್ಯದಲ್ಲೇ ಆತ ಕೊನೆಯುಸಿರೆಳೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. “ಸಂಕೇತ್ ಓದಿನಲ್ಲಿ ಚುರುಕಾಗಿದ್ದ, ಶಾಂತ ಸ್ವಭಾವದವನು” ಎಂದು ಬಂಧುಗಳು ಕಣ್ಣೀರಿಟ್ಟಿದ್ದಾರೆ.
ಘಟನೆಯ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದ್ದಾರೆ.







