First Flight Dream: 5 ಲಕ್ಷ ವೆಚ್ಚ ಮಾಡಿ ವಿಮಾನ ಪ್ರಯಾಣ! ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ನೀಡಿದ ಗುರು
ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಸ್ವಂತ ಹಣದಲ್ಲಿ ವಿದ್ಯಾರ್ಥಿಗಳಿಗೆ ಮೊದಲ ವಿಮಾನ ಪ್ರಯಾಣ ಅನುಭವ ಕಲ್ಪಿಸಿ, ಶಿಕ್ಷಣದ ಜೊತೆಗೆ ಕನಸುಗಳಿಗೆ ರೆಕ್ಕೆ ನೀಡಿದ ಘಟನೆ ಮೆಚ್ಚುಗೆಗೆ ಪಾತ್ರವಾಗಿದೆ.
- .5 ಲಕ್ಷ ವೆಚ್ಚ ಮಾಡಿ ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣ
- ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆ ಹೃದಯಸ್ಪರ್ಶಿ ಘಟನೆ
- ಮುಖ್ಯೋಪಾಧ್ಯಾಯರ ಮಾನವೀಯತೆಗೆ ಪ್ರಶಂಸೆ
ಕರ್ನಾಟಕ, ಕೊಪ್ಪಳ: ಶಿಕ್ಷಕರು ಮಕ್ಕಳ ಜೀವನದಲ್ಲಿ ಪಾಠ ಹೇಳುವವರಷ್ಟೇ ಅಲ್ಲ, ಕನಸುಗಳಿಗೆ ದಾರಿ ತೋರಿಸುವವರೂ ಹೌದು. ಅದಕ್ಕೆ ಜೀವಂತ ಉದಾಹರಣೆ ಎನ್ನುವಂತೆ, ಕೊಪ್ಪಳ ಜಿಲ್ಲೆಯ ಬಹದ್ದೂರಿಬಂಡಿ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಕೆಲಸ ಇಡೀ ರಾಜ್ಯದ ಗಮನ ಸೆಳೆದಿದೆ.
ಮೊದಲ ವಿಮಾನ ಹಾರಾಟ – ಮರೆಯಲಾಗದ ಕ್ಷಣ
ಶಾಲೆಯ 5ರಿಂದ 8ನೇ ತರಗತಿಯವರೆಗೆ ಓದುತ್ತಿರುವ 24 ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ವಿಮಾನ ಏರುವ ಅವಕಾಶ ಸಿಕ್ಕಿತು (First Flight Dream). ತಮ್ಮ ಸ್ವಂತ ಹಣದಿಂದ ಸುಮಾರು ರೂ.5 ಲಕ್ಷ ವೆಚ್ಚ ಮಾಡಿ, ಮುಖ್ಯೋಪಾಧ್ಯಾಯ ಬೀರಪ್ಪ ಅಂದಗಿ ವಿದ್ಯಾರ್ಥಿಗಳ ಕನಸನ್ನು ನಿಜವಾಗಿಸಿದರು. ಉತ್ತಮ ಸಾಧನೆ ಮಾಡಿದ ಪ್ರತಿ ತರಗತಿಯ ಮೊದಲ ಆರು ವಿದ್ಯಾರ್ಥಿಗಳನ್ನು ಈ ವಿಶೇಷ ಪ್ರಯಾಣಕ್ಕೆ ಆಯ್ಕೆ ಮಾಡಲಾಗಿತ್ತು.
A truly heartwarming gesture 🙏✈️
Twenty-four government school students from a village in Koppal experienced their first-ever flight, made possible by the selfless generosity of their headmaster, who personally funded the journey. Two enriching days in Bengaluru, learning,… pic.twitter.com/6E28SKHQVv
— Ravi Boseraju (@raviboseraju) December 31, 2025
ಬಳ್ಳಾರಿ ವಿಮಾನ ನಿಲ್ದಾಣದಿಂದ ಬೆಂಗಳೂರು
ವಿದ್ಯಾರ್ಥಿಗಳು, ಶಿಕ್ಷಕರು, ಮಧ್ಯಾಹ್ನ ಭೋಜನ ಸಿಬ್ಬಂದಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸೇರಿ ಸುಮಾರು 40 ಮಂದಿ, ತೋರಣಗಲ್ಲು ಸಮೀಪದ ಜಿಂದಾಲ್ ವಿಮಾನ ನಿಲ್ದಾಣದಿಂದ ಬೆಂಗಳೂರು (Bengaluru) ಪ್ರಯಾಣಿಸಿದರು. ಬೆಂಗಳೂರು ಪ್ರವಾಸದ ವೇಳೆ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಪ್ರಮುಖ ಸ್ಥಳಗಳನ್ನು ವೀಕ್ಷಿಸಿ, ಎರಡು ದಿನಗಳ ಅನುಭವವನ್ನು ಸಂಗ್ರಹಿಸಿಕೊಂಡರು.
ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ
ವಿಮಾನದಲ್ಲಿ ಹಾರುತ್ತಿರುವ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರ ಮಾನವೀಯತೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ. ಗ್ರಾಮೀಣ ಮಕ್ಕಳಿಗೂ ದೊಡ್ಡ ಕನಸು ಕಾಣುವ ಧೈರ್ಯ ನೀಡಿದ ಈ ಕಾರ್ಯ, ಶಿಕ್ಷಣಕ್ಕೆ ಹೊಸ ಅರ್ಥ ಕೊಟ್ಟಿದೆ.



