Karnataka Weather: ಕರ್ನಾಟಕ ಹವಾಮಾನ ವರದಿ; ಬೆಂಗಳೂರು ತಾಪಮಾನ ಏರಿಕೆ, ರಾಜ್ಯದಲ್ಲಿ ಒಣ ಹವಾಮಾನ
Karnataka Weather: ಕರ್ನಾಟಕದ ಹಲವೆಡೆ ಇಂದು ಶುಷ್ಕ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ತಾಪಮಾನ ಹೆಚ್ಚಾಗುವ ಸೂಚನೆ ಇದ್ದು, ಮಾರ್ಚ್ ಎರಡನೇ ವಾರದ ನಂತರ ಬೇಸಿಗೆ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ.

- ಕರ್ನಾಟಕ ಹವಾಮಾನ ವರದಿ
- ರಾಜ್ಯದೆಲ್ಲೆಡೆ ಶುಷ್ಕ ವಾತಾವರಣ
- ಬೆಂಗಳೂರು ತಾಪಮಾನ ಏರಿಕೆ
ಬೆಂಗಳೂರು (Bengaluru): ಕರ್ನಾಟಕ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬೇಸಿಗೆಯ ತಾಪಮಾನ ನಿಧಾನವಾಗಿ ಏರಿಕೆಯಾಗುತ್ತಿದ್ದು, ಇಂದು ಸಹ ಕರ್ನಾಟಕದ (Karnataka Weather) ಹೆಚ್ಚಿನ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಿಶೇಷವಾಗಿ ಬೆಂಗಳೂರಿನಲ್ಲಿ ಸ್ಪಷ್ಟ ಆಕಾಶ ಕಾಣಿಸಿಕೊಳ್ಳಲಿದ್ದು, ದಿನದ ಹೊತ್ತಿನಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರದಲ್ಲಿ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಬಹುದೆಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಕೂಡ ಮುನ್ನೆಚ್ಚರಿಕೆ ಸೂಚನೆ ನೀಡಿದ್ದು, ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಅಗತ್ಯವಿಲ್ಲದೆ ಹೊರಗೆ ಹೋಗದಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.
ಬಿಸಿಲಿನ ತೀವ್ರತೆ ಹೆಚ್ಚಾದಾಗ ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ವೃದ್ಧರು, ಮಕ್ಕಳು, ಗರ್ಭಿಣಿಯರು ಮತ್ತು ಹೃದಯ ಸಂಬಂಧಿತ ಕಾಯಿಲೆ ಹೊಂದಿರುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಹೆಚ್ಚು ನೀರು ಕುಡಿಯುವುದು, ಹಣ್ಣುಗಳು ಹಾಗೂ ತಂಪು ಪಾನೀಯಗಳನ್ನು ಸೇವಿಸುವುದು ದೇಹದ ತಾಪಮಾನ ನಿಯಂತ್ರಣಕ್ಕೆ ಸಹಾಯಕವಾಗುತ್ತದೆ.
ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ದಕ್ಷಿಣ ಒಳನಾಡಿನ ಹಲವಾರು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಮಂಡ್ಯ, ರಾಮನಗರ, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕೂಡ ಒಣ ಹವೆಯ ವಾತಾವರಣ ಮುಂದುವರಿಯಲಿದೆ.
ಇದೇ ರೀತಿಯಾಗಿ ಕರಾವಳಿ ಭಾಗಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಳೆ ಸಾಧ್ಯತೆ ಕಡಿಮೆಯಿದ್ದು, ಒಣ ಹವಾಮಾನವೇ ಮುಂದುವರಿಯಲಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಕಳೆದ ಕೆಲವು ದಿನಗಳಿಂದ ಕಂಡುಬಂದಿರುವ ಶುಷ್ಕ ವಾತಾವರಣ ಮುಂದುವರಿಯಲಿದೆ.
ಹವಾಮಾನ ತಜ್ಞರ ಅಂದಾಜಿನ ಪ್ರಕಾರ ಮಾರ್ಚ್ ಎರಡನೇ ವಾರದ ನಂತರ ರಾಜ್ಯದಲ್ಲಿ ಬೇಸಿಗೆ ಮತ್ತಷ್ಟು ತೀವ್ರವಾಗುವ ಲಕ್ಷಣಗಳಿವೆ. ಇದರಿಂದ ಈ ವರ್ಷವೂ ಬೆಂಗಳೂರಿನ ಜನರಿಗೆ ಕಠಿಣ ಬೇಸಿಗೆಯ ಅನುಭವ ಎದುರಾಗುವ ಸಾಧ್ಯತೆ ಇದೆ.



