ಭೀಕರ ಅಪಘಾತ: ಕಾರು ಬೈಕ್ ನಡುವೆ ಮುಖಾಮುಖಿ ಡಿಕ್ಕಿ, ಮೂವರು ದುರ್ಮರಣ
ಬಸವಕಲ್ಯಾಣದತ್ತ ಬೈಕ್ನಲ್ಲಿ ಮರಳುತ್ತಿದ್ದ ಮೂವರು ಯುವಕರು ಕಾರಿನೊಂದಿಗೆ ಮುಖಾಮುಖಿ ಡಿಕ್ಕಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ 12 ವರ್ಷದ ಬಾಲಕನೂ ಸೇರಿದ್ದು, ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ.

- ಮುಚಳಂಬ ಬಳಿ ಕಾರು-ಬೈಕ್ ಮುಖಾಮುಖಿ ಡಿಕ್ಕಿ
- ಒಂದೇ ಬೈಕ್ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
- ಮೃತರಲ್ಲಿ 12 ವರ್ಷದ ಬಾಲಕ ಕೂಡ ಸೇರಿದ್ದಾನೆ
ಬೀದರ್: ಹುಲಸೂರು ತಾಲೂಕಿನ ಮುಚಳಂಬ ಗ್ರಾಮದ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಜಾತ್ರೆಯ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದವರ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ.
ಸೋಮವಾರ (ನ.23) ಮಧ್ಯರಾತ್ರಿ ಸುಮಾರು 1 ಗಂಟೆಗೆ ಎರ್ಟಿಗಾ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಸವಕಲ್ಯಾಣದಿಂದ ಗೋರ್ಟಾ ಗ್ರಾಮದ ಕಡೆಗೆ ಕಾರು ತೆರಳುತ್ತಿದ್ದರೆ, ಮತ್ತೊಂದೆಡೆ ಮುಚಳಂಬದಿಂದ ಬಸವಕಲ್ಯಾಣದತ್ತ ಬೈಕ್ ಸಾಗುತ್ತಿತ್ತು. ಈ ವೇಳೆ ನಡೆದ ಅಪಘಾತದ ತೀವ್ರತೆಗೆ ಬೈಕ್ನಲ್ಲಿದ್ದ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಬಸವಕಲ್ಯಾಣದ ಲಾಲ್ ತಲಾಬ್ ನಿವಾಸಿ ಬಾಬಾ (26), ಪಾರ್ತಾಪುರ ರಸ್ತೆ ಡಿಮ್ಯಾಂಡ್ ಕಾಲೇಜು ಸಮೀಪದ ನಿವಾಸಿ ಎಂಡಿ ಸುಮೇರ್ (22) ಹಾಗೂ ಲಾಲ್ ತಲಾಬ್ ನಿವಾಸಿ ರೆಹಾನ್ (12) ಎಂದು ಗುರುತಿಸಲಾಗಿದೆ.
ಮೂವರೂ ಮುಚಳಂಬ ಗ್ರಾಮದಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಉಯ್ಯಾಲೆ ಹಾಕುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸ ಮುಗಿದ ಬಳಿಕ ಒಂದೇ ಬೈಕ್ನಲ್ಲಿ ಬಸವಕಲ್ಯಾಣಕ್ಕೆ ವಾಪಸ್ ಹೊರಟಿದ್ದರು. ಆದರೆ, ಮನೆ ತಲುಪುವ ಮುನ್ನವೇ ಅಪಘಾತ ಸಂಭವಿಸಿರುವುದು ಕುಟುಂಬಸ್ಥರನ್ನು ಶೋಕದಲ್ಲಿ ಮುಳುಗಿಸಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ನೆರವಿಗೆ ಧಾವಿಸಿದರು. ಧರಂ ಸಿಂಗ್ ಫೌಂಡೇಶನ್ನ ಆಂಬ್ಯುಲೆನ್ಸ್ ಮೂಲಕ ಮೃತದೇಹಗಳನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತು.
ಈ ನಡುವೆ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅಂಬರೀಷ್ ವಾಗ್ಮಾರೆ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಒಂದೇ ಕುಟುಂಬದವರಂತೆ ಒಟ್ಟಿಗೆ ಕೆಲಸ ಮುಗಿಸಿ ಮರಳುತ್ತಿದ್ದ ಮೂವರು ಅಪಘಾತದಲ್ಲಿ ಮೃತಪಟ್ಟಿರುವುದು ಮುಚಳಂಬ ಮತ್ತು ಬಸವಕಲ್ಯಾಣ ಭಾಗದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.



