3 ವರ್ಷದ ಬಾಲಕಿ, ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಸಾವು! ದುರಂತಕ್ಕೆ ಕುಟುಂಬ ಕಣ್ಣೀರು
ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿ ಶಾಲಾ ಬಸ್‌ನ ಮುಂದಿನ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದು, ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

- ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಬಾಲಕಿ ಮೃತಪಟ್ಟಿದ್ದಾಳೆ.
- ವಿಜಯಪುರ ಕೈಗಾರಿಕಾ ಪ್ರದೇಶದಲ್ಲಿ ದುರಂತ ಸಂಭವಿಸಿದೆ.
- ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿಜಯಪುರ ನಗರದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ನಡೆದ ದುರಂತದಲ್ಲಿ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಶಾಲಾ ಬಸ್‌ನ ಮುಂದಿನ ಚಕ್ರಕ್ಕೆ ಸಿಲುಕಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ಕುಟುಂಬಸ್ಥರಲ್ಲಿ ಆಘಾತ ಮೂಡಿಸಿದೆ.
ಮೃತ ಬಾಲಕಿಯನ್ನು ಶಿರ್ಷಾ ಸುಹಾಸ ವಾಡಿ ಎಂದು ಗುರುತಿಸಲಾಗಿದೆ. ಖಾಸಗಿ ಶಾಲೆಯಲ್ಲಿ ಓದುತ್ತಿರುವ ತನ್ನ ಅಣ್ಣ ಶಾಲಾ ಬಸ್‌ನಲ್ಲಿ ಮನೆಗೆ ಬಂದಿದ್ದ. ಬಸ್‌ನಿಂದ ಅಣ್ಣ ಕೆಳಗಿಳಿಯುತ್ತಿದ್ದುದನ್ನು ನೋಡಿದ ಬಾಲಕಿ ಆತನನ್ನು ಮಾತನಾಡಿಸಲು ಮನೆಯ ಹೊರಗೆ ಬಂದಿದ್ದಳು ಎನ್ನಲಾಗಿದೆ.
ಅಣ್ಣನ ಬಳಿಗೆ ಹೋಗಲು ಬಾಲಕಿ ಬಸ್‌ನ ಮುಂಭಾಗದಿಂದ ತೆರಳುತ್ತಿದ್ದ ವೇಳೆ ಚಾಲಕ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಬಾಲಕಿ ಚಾಲಕನ ಗಮನಕ್ಕೆ ಬಾರದೆ ಬಸ್‌ನ ಮುಂದಿನ ಚಕ್ರಕ್ಕೆ ಸಿಲುಕಿದ್ದಾಳೆ.
ಅಪಘಾತದ ತೀವ್ರತೆಗೆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಚಾಲಕನ ನಿರ್ಲಕ್ಷ್ಯ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಈ ಸಂಬಂಧ ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸಂಪೂರ್ಣ ವಿವರಗಳನ್ನು ಪೊಲೀಸರು ತನಿಖೆಯ ಬಳಿಕ ಸ್ಪಷ್ಟಪಡಿಸಲಿದ್ದಾರೆ.



