ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಇಳಿದಿದ್ದ ಇಬ್ಬರು ಸಹೋದರರು ದುರಂತ ಸಾವು
ದಾವಣಗೆರೆ ಜಿಲ್ಲೆಯ ಹದಡಿ ಕೆರೆಯಲ್ಲಿ ಕುರಿಗಳಿಗೆ ನೀರು ಕುಡಿಸಲು ತೆರಳಿದ್ದ ಇಬ್ಬರು ಸಹೋದರರು ದುರಂತ ಅಂತ್ಯ ಕಂಡಿದ್ದಾರೆ. ನೀರಿನ ಆಳ ತಿಳಿಯದೆ ಕೆರೆಗೆ ಇಳಿದಿದ್ದ ಇಬ್ಬರೂ ಮೇಲಕ್ಕೆ ಬರಲಾಗದೆ ಪ್ರಾಣ ಕಳೆದುಕೊಂಡಿದ್ದಾರೆ.

ದಾವಣಗೆರೆ (Davanagere) ಜಿಲ್ಲೆಯ ಹದಡಿ ಕೆರೆಯಲ್ಲಿ (Hadadi Lake) ನಡೆದ ಈ ದುರಂತ ಬಟ್ಲಕಟ್ಟೆ ಗ್ರಾಮದಲ್ಲಿ ದುಃಖದ ವಾತಾವರಣ ಮೂಡಿಸಿದೆ. ಕುರಿ ಮೇಯಿಸುವ ಕೆಲಸ ಮಾಡುತ್ತಿದ್ದ ದೇವರಾಜ್ ಮತ್ತು ಶಿವರಾಜ್ ಮೃತಪಟ್ಟ ಸಹೋದರರು.
ಮಧ್ಯಾಹ್ನದ ಸಮಯದಲ್ಲಿ ಎಂದಿನಂತೆ ಕುರಿಗಳನ್ನು ಕೆರೆಗೆ ಕರೆದುಕೊಂಡು ಹೋಗಿದ್ದ ಸಹೋದರರು, ಅವುಗಳಿಗೆ ನೀರು ಕುಡಿಸಿದ್ದಾರೆ. ಬಳಿಕ ತಾವೂ ಕೆರೆಯಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಿದ್ದಾರೆ. ಆದರೆ, ಕೆರೆಯಲ್ಲಿದ್ದ ಆಳವಾದ ಗುಂಡಿಗಳ ಬಗ್ಗೆ ಅರಿವಿಲ್ಲದೆ ಇಬ್ಬರೂ ಅಪಾಯಕ್ಕೆ ಸಿಲುಕಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದ ಸಹೋದರರಿಗೆ ದಡ ಸೇರಲು ಸಾಧ್ಯವಾಗಿಲ್ಲ. ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವೇಳೆ ಒಂದು ಮೃತದೇಹವನ್ನು ಹೊರತೆಗೆದಿದ್ದು, ಮತ್ತೊಬ್ಬರಿಗಾಗಿ ಶೋಧ ಮುಂದುವರಿಸಿದ್ದಾರೆ.
ವಿಷಯ ತಿಳಿದು ಹದಡಿ ಪೊಲೀಸ್ ಠಾಣೆಯ (Hadadi Police Station) ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ.



