ಕೋಲಾರ: ಆಟವಾಡುತ್ತಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳ ದಾರುಣ ಸಾವು

ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಆಟವಾಡುತ್ತಿದ್ದ ವೇಳೆ ಕೃಷಿ ಹೊಂಡಕ್ಕೆ ಬಿದ್ದ ಬಾಲಕನನ್ನು ರಕ್ಷಿಸಲು ಹೋದ ವಿದ್ಯಾರ್ಥಿನಿಯೂ ಮುಳುಗಿ ಮೃತಪಟ್ಟಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೊಡೇನಹಳ್ಳಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದು, ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಮಕ್ಕಳ ಸಾವಿನ ಸುದ್ದಿ ಕೇಳಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತರನ್ನು ಕಾರ್ತಿಕ್ (8) ಮತ್ತು ತನುಶ್ರೀ (15) ಎಂದು ಗುರುತಿಸಲಾಗಿದೆ. ಕಾರ್ತಿಕ್ ನಲ್ಲಗುಟ್ಟಹಳ್ಳಿಯ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದರೆ, ತನುಶ್ರೀ ಬಂಗಾರಪೇಟೆ ತಾಲೂಕಿನ ಡಿ.ಪಿ.ಹಳ್ಳಿಯ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತನುಶ್ರೀ 86 ಶೇಕಡಾ ಅಂಕಗಳನ್ನು ಗಳಿಸಿದ್ದಳು ಎನ್ನಲಾಗಿದೆ.

ಅಜ್ಜಿ ಮತ್ತು ತಾಯಿಯೊಂದಿಗೆ ತೋಟಕ್ಕೆ ತೆರಳಿದ್ದ ಮಕ್ಕಳು ಆಟವಾಡುತ್ತಿದ್ದರು. ಇದೇ ವೇಳೆ ಕಾರ್ತಿಕ್ ಆಕಸ್ಮಿಕವಾಗಿ ಕಾಲು ಜಾರಿ ಪಕ್ಕದಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಇದನ್ನು ಗಮನಿಸಿದ ತನುಶ್ರೀ, ಬಾಲಕನನ್ನು ರಕ್ಷಿಸಲು ತಕ್ಷಣ ಹೊಂಡಕ್ಕೆ ಇಳಿದಿದ್ದಾಳೆ.

ಆದರೆ ಹೊಂಡದ ನೀರಿನ ಆಳದ ಬಗ್ಗೆ ಅರಿವಿಲ್ಲದ ಕಾರಣ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಮತ್ತು ಕುಟುಂಬದವರು ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕ್ಷಣಾರ್ಧದಲ್ಲಿ ನಡೆದ ಈ ದುರಂತ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಘಟನೆ ತಿಳಿದ ತಕ್ಷಣ ಬಂಗಾರಪೇಟೆ ತಹಸೀಲ್ದಾರ್ ಕೆ.ಎನ್. ಸುಜಾತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ ಕೆ.ಎಂ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಕ್ಕಳ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಮಕ್ಕಳ ಸಾವಿನಿಂದ ಗ್ರಾಮದಲ್ಲಿ ಮೌನ ಆವರಿಸಿದ್ದು, ಶಾಲಾ ಸ್ನೇಹಿತರು ಮತ್ತು ಶಿಕ್ಷಕರೂ ಕಣ್ಣೀರಿಟ್ಟಿದ್ದಾರೆ.

Related Stories