ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಅಕ್ರಮ ಮೋಜು! ಮದ್ಯ, ಗಾಂಜಾ ಸೇವನೆ ವಿಡಿಯೋ ವೈರಲ್

ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ವಿಶ್ವೇಶ್ವರಯ್ಯ ನಗರದಲ್ಲಿರುವ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಮದ್ಯ, ಗಾಂಜಾ ಸೇವನೆ ಮಾಡಿ ಮೊಬೈಲ್ ಬಳಕೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿ ಕಾನೂನು ಸುವ್ಯವಸ್ಥೆ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

  • ಹುಬ್ಬಳ್ಳಿ ಉಪ ಕಾರಾಗೃಹದಲ್ಲಿ ಅಕ್ರಮ ಸೌಲಭ್ಯ
  • ಮದ್ಯ, ಗಾಂಜಾ ಸೇವನೆ ದೃಶ್ಯಗಳು ಬಹಿರಂಗ
  • ಡಿಜೈಲಿನೊಳಗಿನ ಚಟುವಟಿಕೆ ಚರ್ಚೆಗೆ ಗ್ರಾಸ

Hubballi Sub Jail: ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಉಪ ಕಾರಾಗೃಹ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಿಚಾರಣಾಧೀನ ಕೈದಿಗಳು ಜೈಲಿನೊಳಗೇ ಮೊಬೈಲ್ ಬಳಸುವುದು, ಸೆಲ್ಫಿ ತೆಗೆಯುವುದು, ಮದ್ಯ ಮತ್ತು ಗಾಂಜಾ ಸೇವನೆ ಮಾಡುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ.

ಕಾನೂನು ಕಠಿಣವಾಗಿರಬೇಕಾದ ಸ್ಥಳದಲ್ಲೇ ಈ ರೀತಿಯ “ಬಿಂದಾಸ್ ಲೈಫ್” ನಡೆಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಹಣ ಕೊಟ್ಟರೆ ಎಲ್ಲ ಸೌಲಭ್ಯಗಳು ಸಿಗುತ್ತವೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಆಡಳಿತದ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗಿದೆ.

ಡಿಜಿಪಿ ಭೇಟಿ ಬಳಿಕವೇ ಸಂಚಲನ

ಗಮನಾರ್ಹ ಸಂಗತಿ ಎಂದರೆ, ಕೇವಲ ಮೂರು ದಿನಗಳ ಹಿಂದಷ್ಟೇ ರಾಜ್ಯದ ಡಿಜಿಪಿ ಅಲೋಕ್ ಕುಮಾರ್ ಅವರು ವಿಶ್ವೇಶ್ವರಯ್ಯ ನಗರದಲ್ಲಿರುವ ಉಪ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಜೈಲಿನ ಭದ್ರತಾ ವ್ಯವಸ್ಥೆ, ಕಟ್ಟಡದ ಸ್ಥಿತಿ, ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.

ಆದರೆ ಅವರ ಭೇಟಿಯ ಕೆಲವೇ ದಿನಗಳಲ್ಲಿ ಈ ವಿಡಿಯೋ ಹೊರಬಿದ್ದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಪರಿಶೀಲನೆ ಬಳಿಕವೂ ಜೈಲಿನೊಳಗೆ ಅಕ್ರಮ ಚಟುವಟಿಕೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಗಂಭೀರ ಪ್ರಕರಣದ ಆರೋಪಿಗಳೂ ಇದ್ದಾರೇ?

ಈ ಉಪ ಕಾರಾಗೃಹದಲ್ಲಿ ಕಳೆದ ವರ್ಷ ನವೆಂಬರ್ 13ರಂದು ನಡೆದಿದ್ದ ಮಲ್ಲಿಕ್ ಕೊಲೆ ಪ್ರಕರಣ ಸೇರಿದಂತೆ ಹಲವು ಗಂಭೀರ ಪ್ರಕರಣಗಳ ಆರೋಪಿಗಳು ಬಂಧಿತರಾಗಿದ್ದಾರೆ. ಬೆಂಡಿಗೇರಿ ಠಾಣೆ ಪೊಲೀಸರು ಆ ಪ್ರಕರಣದಲ್ಲಿ 17 ಮಂದಿಯನ್ನು ಬಂಧಿಸಿದ್ದರು.

ವೈರಲ್ ವಿಡಿಯೋದಲ್ಲಿ ಕೆಲ ಪ್ರಮುಖ ಆರೋಪಿಗಳು ಕಾಣಿಸಿಕೊಂಡಿರುವುದಾಗಿ ಹೇಳಲಾಗುತ್ತಿದ್ದು, ಇದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ತನಿಖೆ ಆರಂಭ

ಜೈಲಿನೊಳಗೆ ಗಾಂಜಾ, ಮದ್ಯ ಹಾಗೂ ಮೊಬೈಲ್‌ಗಳ ಪೂರೈಕೆ ಹೇಗೆ ನಡೆಯುತ್ತಿದೆ? ಒಳಗಿನಿಂದ ಯಾರಾದರೂ ಸಹಕಾರ ನೀಡುತ್ತಿದ್ದಾರೇ? ಎಂಬ ಪ್ರಶ್ನೆಗಳು ಈಗ ಜನರಲ್ಲಿ ಮೂಡಿವೆ.

ಸಂಬಂಧಿತ ಅಧಿಕಾರಿಗಳು ವಿಡಿಯೋ ನೈಜತೆಯನ್ನು ಪರಿಶೀಲಿಸಿ ತನಿಖೆ ಆರಂಭಿಸಿರುವುದಾಗಿ ತಿಳಿದುಬಂದಿದೆ. ತಪ್ಪಿತಸ್ಥರು ಯಾರು ಎಂಬುದು ತನಿಖೆ ಬಳಿಕ ಸ್ಪಷ್ಟವಾಗಲಿದೆ ಎಂದು ಮೂಲಗಳು ಹೇಳಿವೆ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories