ಮರದ ದಿಮ್ಮಿಯಿಂದ ಹೊಡೆದು ಗಂಡನ ಹತ್ಯೆ ಮಾಡಿದ ಹೆಂಡತಿ
ಪತಿ ತನ್ನ ಆಸ್ತಿಯನ್ನು ಸಹೋದರಿ ಹೆಸರಿಗೆ ಬರೆದಿದ್ದಕ್ಕೆ ಬೇಸತ್ತ ಪತ್ನಿ ಪತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳಿಂದ ಪತ್ನಿಯ ಕ್ರೂರ ಕೃತ್ಯ ಬಹಿರಂಗವಾಗಿದೆ.

- ಗಂಡ ತನ್ನ ಆಸ್ತಿಯನ್ನು ಸಹೋದರಿ ಹೆಸರಿಗೆ ಬರೆದಿದ್ದಕ್ಕೆ ಹೆಂಡತಿ ಆಕ್ರೋಶ
- ಮರದ ದಿಮ್ಮಿಯಿಂದ ಹೊಡೆದು ಕೊಟ್ಟಿಗೆಯಲ್ಲಿ ಗಂಡನ ಬಿಟ್ಟು ಹೋದ ಪತ್ನಿ
- ಸಿಸಿಟಿವಿ ದೃಶ್ಯಾವಳಿಯಿಂದ ಪತ್ನಿ ಶಾಂತಮ್ಮ ಬಂಧನ, ಮುಂದುವರಿದ ತನಿಖೆ
ಬೆಂಗಳೂರು: ಪತಿ ತನ್ನ 3 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಹೋದರಿಯ ಹೆಸರಿಗೆ ಬರೆದಿದ್ದಕ್ಕೆ ಬೇಸತ್ತ ಪತ್ನಿ, ಪತಿಯನ್ನು ಹತ್ಯೆ ಮಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಮೃತರು ಚೆಲುವರಾಜು (52) ಎಂಬವರಾಗಿದ್ದು, ಪತ್ನಿ ಶಾಂತಮ್ಮ (50) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಬೆಳಿಗ್ಗೆ 9.30ರ ವೇಳೆಗೆ ನಡೆಯಿತು. ಶಾಂತಮ್ಮ ಅವರು ತಮ್ಮ ಪತಿಯೊಂದಿಗೆ ಜಗಳವಾಡಿದ ನಂತರ, ಅಕ್ಕಪಕ್ಕದವರು ಗಮನಿಸದಂತೆ ಮರದ ದಿಮ್ಮಿ ಬಳಸಿ ಅವರ ಮೇಲೆ ಹಲ್ಲೆ ನಡೆಸಿದರು. ತೀವ್ರವಾದ ಗಾಯಗಳಿಂದ ರಕ್ತಸ್ರಾವಗೊಂಡ ಪತಿಯನ್ನು ಆಕೆ ಹತ್ತಿರದ ಕೊಟ್ಟಿಗೆಗೆ ಎಳೆದೊಯ್ದು ಬಿಟ್ಟು ಬಾಗಿಲು ಹಾಕಿದ್ದರು.
ಸಂಜೆ ಕೆಲಸ ಮುಗಿಸಿ ಮನೆಗೆ ಬಂದಿದ್ದ ಮಗ ತಂದೆ ಇಲ್ಲದಿರುವುದನ್ನು ಗಮನಿಸಿದನು. ಹುಡುಕಾಟ ನಡೆಸಿದಾಗ ಕೊಟ್ಟಿಗೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತಂದೆ ಪತ್ತೆಯಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ವಿಚಾರಣೆ ಪ್ರಾರಂಭವಾಯಿತು.
ಸಿಸಿಟಿವಿ ದೃಶ್ಯದಿಂದ ಪತ್ತೆಯಾದ ನಿಜಾಂಶ:
ಪ್ರಾಥಮಿಕ ತನಿಖೆ ವೇಳೆ ಕುಟುಂಬಸ್ಥರು ಪತಿ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಪತ್ನಿ ಶಾಂತಮ್ಮ ಅವರು ಪತಿಯನ್ನು ಹೊಡೆದು ಕೊಟ್ಟಿಗೆಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಪತ್ತೆಯಾಗಿದ್ದು, ಪೊಲೀಸರು ಅವರನ್ನ ಬಂಧಿಸಿದ್ದಾರೆ.
ಆಸ್ತಿ ವಿವಾದವೇ ಹತ್ಯೆಗೆ ಕಾರಣ?
ಚೆಲುವರಾಜು ಅವರು ತಮ್ಮ ಪತ್ನಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರಿಂದ ಬೇಸತ್ತಿದ್ದರು. ಇದರಿಂದಾಗಿ, ತಮ್ಮ ಹೊಸೂರಿನ 3 ಕೋಟಿ ಮೌಲ್ಯದ ಆಸ್ತಿಯನ್ನು ಸಹೋದರಿ ಹೆಸರಿಗೆ ಬರೆದಿದ್ದರು. ಈ ಆಸ್ತಿಯು ಬಿಡದಿ ಕೈಗಾರಿಕಾ ಪ್ರದೇಶದ ಹತ್ತಿರವಿರುವುದಾಗಿ ತಿಳಿದು ಬಂದಿದೆ.
Wife Kills Husband Over Property Dispute







