ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ತೆರಳಿದ್ದ ವ್ಯಕ್ತಿ ಶವವಾಗಿ ಪತ್ತೆ

ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ತೆರಳಿದ್ದ ವ್ಯಕ್ತಿಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಅಥವಾ ಆತ್ಮಹತ್ಯೆ ಎಂಬ ಅನುಮಾನ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಣಮಾಪುರ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದ ಸಾವಿನ ಘಟನೆ ದೊಡ್ಡ ಸಂಚಲನ ಮೂಡಿಸಿದೆ. ಜೋಡಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿದ್ದ ವ್ಯಕ್ತಿಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮೃತ ವ್ಯಕ್ತಿಯನ್ನು ಮಹಾರಾಷ್ಟ್ರ ಮೂಲದ ದಾದಾಸೋ ಇಮಗರ (56) ಎಂದು ಗುರುತಿಸಲಾಗಿದೆ. ಮೂರು ವರ್ಷಗಳ ಹಿಂದೆ ನಡೆದಿದ್ದ ಕುಟುಂಬ ಕಲಹದ ವೇಳೆ, ಬಾವಿ ವಿಚಾರಕ್ಕೆ ಸಂಬಂಧಿಸಿದ ಜಗಳದಲ್ಲಿ ದಾದಾಸೋ ಅವರ ಮಗ ಮತ್ತು ತಮ್ಮನನ್ನು ಸಂಬಂಧಿಕರು ಹತ್ಯೆ ಮಾಡಿದ್ದರು. ಆ ಘಟನೆಯನ್ನು ದಾದಾಸೋ ಕಣ್ಣಾರೆ ನೋಡಿದ್ದರಿಂದ ಪ್ರಕರಣದಲ್ಲಿ ಅವರು ಪ್ರಮುಖ ಸಾಕ್ಷಿದಾರರಾಗಿದ್ದರು.

ಈ ಸಂಬಂಧ ಹತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂವರಿಗೆ ಜಾಮೀನು ಸಿಕ್ಕಿದೆ. ಉಳಿದ ಏಳು ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆ, ದಾದಾಸೋ ಸಾಂಗ್ಲಿ ನ್ಯಾಯಾಲಯಕ್ಕೆ ಸಾಕ್ಷಿ ನೀಡಲು ತೆರಳಿದ್ದರು ಎನ್ನಲಾಗಿದೆ.

ಆದರೆ ಮಧ್ಯದಲ್ಲೇ ಅಪರಿಚಿತರು ಅವರನ್ನು ಅಪಹರಿಸಿದ್ದಾರೆಯೆಂಬ ಅನುಮಾನ ವ್ಯಕ್ತವಾಗಿತ್ತು. ಈ ಕುರಿತು ಜತ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣವೂ ದಾಖಲಾಗಿತ್ತು. ಬಳಿಕ ಅಥಣಿ ಸಮೀಪದ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮತ್ತು ಆಕ್ರೋಶ ಹೆಚ್ಚಿಸಿದೆ.

ಘಟನಾ ಸ್ಥಳಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಾಂಗ್ಲಿ ಎಸ್‌ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ.

ಪ್ರಮುಖ ಸಾಕ್ಷಿದಾರನ ಸಾವು ಪ್ರಕರಣದ ದಿಕ್ಕನ್ನೇ ಬದಲಾಯಿಸಬಹುದಾದ ಸಾಧ್ಯತೆ ಇರುವುದರಿಂದ, ಪೊಲೀಸರು ಪ್ರತಿಯೊಂದು ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರಲ್ಲಿ ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

Related Stories