ತಲೆಗೆ ಸಿಮೆಂಟ್ ಕಲ್ಲಿನಿಂದ ಹಲ್ಲೆ ಮಾಡಿ ಚಿನ್ನದ ಸರ ದೋಚಿ ದುಷ್ಕರ್ಮಿ ಪರಾರಿ
ಮಣಿಪಾಲದ ಶಾಂತಿನಗರದ ಬಾಡಿಗೆ ಮನೆಯಲ್ಲಿ ಒಬ್ಬಳೇ ಇದ್ದ ಯುವತಿಯ ಮೇಲೆ ಅಪರಿಚಿತ ವ್ಯಕ್ತಿ ಕ್ರೂರವಾಗಿ ಹಲ್ಲೆ ನಡೆಸಿ ಚಿನ್ನದ ಸರ ಕಳವು ಮಾಡಿರುವ ಘಟನೆ ಆತಂಕ ಮೂಡಿಸಿದೆ.

ಮಣಿಪಾಲದ ಅಲೆವೂರು ರಸ್ತೆಯ ಶಾಂತಿನಗರ ಪ್ರದೇಶದಲ್ಲಿ ನಡೆದ ಭೀಕರ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಯುವತಿಯ ಮೇಲೆ ಅಪರಿಚಿತ ವ್ಯಕ್ತಿ ಹಲ್ಲೆ ನಡೆಸಿ ಚಿನ್ನದ ಸರ ದೋಚಿಕೊಂಡು ಪರಾರಿಯಾಗಿದ್ದಾನೆ.
ಕುಮಟಾ ತಾಲೂಕಿನ ಕೂಜಲಿ ಗ್ರಾಮದ ಮೇಘಾ ಮಂಜುನಾಥ ಗೌಡ (25) ತಮ್ಮ ಸ್ನೇಹಿತೆಯರಾದ ನಾಗರತ್ನಾ, ಗಗನಾ ಹಾಗೂ ಯೋಗಿತಾ ಜೊತೆ ಶಾಂತಿನಗರದ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಮೇ 12ರ ರಾತ್ರಿ ಮೂವರು ಕೆಲಸದ ನಿಮಿತ್ತ ಮಣಿಪಾಲ ಕೈಗಾರಿಕಾ ಪ್ರದೇಶದ ಕಂಪನಿಗೆ ತೆರಳಿದ್ದರು.
ಆ ವೇಳೆ ಮನೆಯಲ್ಲಿ ಯೋಗಿತಾ ಮಾತ್ರ ಇದ್ದರು ಎಂದು ತಿಳಿದುಬಂದಿದೆ. ಮೇ 13ರ ಬೆಳಗ್ಗೆ ಸುಮಾರು 7.15ರ ವೇಳೆಗೆ ಸ್ನೇಹಿತೆಯರು ಮನೆಗೆ ಮರಳಿದಾಗ ಬಾಗಿಲು ಅರೆ ತೆರೆದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅನುಮಾನಗೊಂಡು ಒಳಗೆ ಪ್ರವೇಶಿಸಿದಾಗ ಯೋಗಿತಾ ನೆಲದ ಮೇಲೆ ರಕ್ತದ ಮಡುವಿನಲ್ಲಿ ಅರೆಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.
ಆಕೆಯ ತಲೆಗೆ ಸಿಮೆಂಟ್ ಕಲ್ಲಿನಿಂದ ಬಲವಾಗಿ ಹೊಡೆದಿರುವ ಗುರುತುಗಳು ಕಂಡುಬಂದಿವೆ. ಅಲ್ಲದೆ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಸರ ನಾಪತ್ತೆಯಾಗಿತ್ತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿದ ವ್ಯಕ್ತಿ ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ. ಸಿಸಿಟಿವಿ ದೃಶ್ಯಗಳು ಹಾಗೂ ಸ್ಥಳೀಯ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿದಿದೆ.



