Tumakuru: ತುಮಕೂರಿನಲ್ಲಿ ಮಹಿಳೆ ಹತ್ಯೆ, ಸಾಕು ಮಗ–ಸಹೋದರಿಯಿಂದಲೇ ಕೃತ್ಯ
ತುಮಕೂರು ಜಿಲ್ಲೆಯ ಜೋಗಿಹಳ್ಳಿಯಲ್ಲಿ ಎಫ್‌ಡಿಎ ಆಗಿದ್ದ ಮಹಿಳೆಯನ್ನು ಸಾಕು ಮಗ ಮತ್ತು ಸಹೋದರಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೃದಯಾಘಾತ ಎಂದು ನಂಬಿಸಿದ ಪ್ರಕರಣ ತನಿಖೆಯಲ್ಲಿ ಹತ್ಯೆ ಎಂದು ಪತ್ತೆಯಾಗಿದೆ.

- ತುಮಕೂರು ಮಹಿಳೆ ಹತ್ಯೆ ಪ್ರಕರಣಕ್ಕೆ ತಿರುವು
- ಸಾಕು ಮಗ ಮತ್ತು ಸಹೋದರಿಯ ಬಂಧನ
- ಹೃದಯಾಘಾತ ಕಥೆ ಬಯಲಿಗೆಳೆದ ಪೊಲೀಸರು
ಬೆಂಗಳೂರು (Bengaluru): ತುಮಕೂರು ಜಿಲ್ಲೆಯ (Tumakuru) ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೋಗಿಹಳ್ಳಿಯಲ್ಲಿ ನಡೆದ ಮಹಿಳೆಯ ಸಾವಿನ ಪ್ರಕರಣ ಭಾರೀ ತಿರುವು ಪಡೆದುಕೊಂಡಿದೆ. ಮೊದಲಿಗೆ ಹೃದಯಾಘಾತ ಎಂದು ಹೇಳಲಾಗಿದ್ದ ಈ ಘಟನೆ ಇದೀಗ ಕೊಲೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮೃತರನ್ನು ಜಯಲಕ್ಷ್ಮೀ ಎಂದು ಗುರುತಿಸಲಾಗಿದ್ದು, ಅವರು ತುರುವೇಕೆರೆ ತಾಲೂಕಿನ ಬಿಇಒ ಕಚೇರಿಯಲ್ಲಿ ಎಫ್‌ಡಿಎ ಆಗಿ ಕೆಲಸ ಮಾಡುತ್ತಿದ್ದರು. ಗಂಡನನ್ನು ಕಳೆದುಕೊಂಡು ಹಲವು ವರ್ಷಗಳಿಂದ ಒಂಟಿಯಾಗಿದ್ದ ಅವರು, ತಮ್ಮ ಸಹೋದರಿ ಅನುಸೂಯಾ ಅವರ ಮಗ ಚಂದ್ರಶೇಖರ್‌ರನ್ನು ದತ್ತು ಪಡೆದು ಸಾಕಿಕೊಂಡಿದ್ದರು. ಆದರೆ ಅದೇ ಸಂಬಂಧವೇ ಅಂತಿಮವಾಗಿ ದುರಂತಕ್ಕೆ ಕಾರಣವಾದುದು ನೋವು ತಂದಿದೆ.
ಜಯಲಕ್ಷ್ಮೀ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶ್ರೀನಿವಾಸ್ ಎಂಬ ವ್ಯಕ್ತಿ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪ್ರಕರಣದ ಸ್ವರೂಪವೇ ಬದಲಾಗಿದೆ. ಅಂತ್ಯಕ್ರಿಯೆಗೆ ಸಿದ್ಧವಾಗಿದ್ದ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಸಾಕು ಮಗ ಹಾಗೂ ಸಹೋದರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ತನಿಖೆಯಲ್ಲಿ ತಡರಾತ್ರಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿದೆ. ತುಮಕೂರಿನಲ್ಲಿ ವಾಸವಾಗಿದ್ದ ಅನುಸೂಯಾ ಮತ್ತು ಚಂದ್ರಶೇಖರ್ ಕಳೆದ ಎಂಟು ತಿಂಗಳ ಹಿಂದೆ ಜಯಲಕ್ಷ್ಮೀ ನಿವಾಸಕ್ಕೆ ಬಂದಿದ್ದರು. ಈ ಅವಧಿಯಲ್ಲಿ ಆರ್ಥಿಕ ವಿಷಯಗಳು ಹಾಗೂ ಮನೆ ಬದಲಾವಣೆ ವಿಚಾರವಾಗಿ ಮನಸ್ತಾಪ ಉಂಟಾಗಿದ್ದುದಾಗಿ ತಿಳಿದುಬಂದಿದೆ.
ಮೃತರು ತುರುವೇಕೆರೆಯಲ್ಲಿ ಹೊಸ ಮನೆಗೆ ಸ್ಥಳಾಂತರವಾಗಲು ನಿರ್ಧರಿಸಿ ಬಾಡಿಗೆ ಮನೆಗೆ ಮುಂಗಡ ಹಣ ನೀಡಿದ್ದರು. ಈ ಬೆಳವಣಿಗೆ ತಿಳಿದ ಆರೋಪಿಗಳು ಕೋಪದಿಂದ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಅನುಕಂಪದ ಆಧಾರದ ಮೇಲೆ ದೊರೆತ ಸರ್ಕಾರಿ ಉದ್ಯೋಗ ಹಾಗೂ ಆರ್ಥಿಕ ವಿಚಾರಗಳೂ ಹಿನ್ನೆಲೆಯಾಗಿರಬಹುದೆಂದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ಟಿನಲ್ಲಿ, ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಮಹಿಳೆಯ ದುರಂತ ಅಂತ್ಯ ಕುಟುಂಬದ ಒಳಜಗಳವೇ ಎಷ್ಟು ಭೀಕರವಾಗಬಹುದು ಎಂಬುದನ್ನು ಮತ್ತೆ ನೆನಪಿಸಿದೆ.



