ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನ
- ನಟ ಸರಿಗಮ ವಿಜಿ ಇಂದು (ಜನವರಿ 15) ಬೆಳಿಗ್ಗೆ 9:45ಕ್ಕೆ ನಿಧನ
- ಯಶವಂತಪುರ ಖಾಸಗಿ ಆಸ್ಪತ್ರೆಯಲ್ಲಿ ನ್ಯುಮೋನಿಯಾ ಚಿಕಿತ್ಸೆ ಪಡೆಯುತ್ತಿದ್ದರು
- 269 ಸಿನಿಮಾಗಳು ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಸರಿಗಮ ವಿಜಿ
Actor Sarigama Viji : ನಟ ಸರಿಗಮ ವಿಜಿ ಅವರು ನಿಧನ ಹೊಂದಿದ್ದಾರೆ, ಕನ್ನಡ ಚಿತ್ರರಂಗ ಮತ್ತು ಟಿವಿ ಲೋಕದ ಹಿರಿಯ ನಟ ಸರಿಗಮ ವಿಜಿ ಅವರು ಇಂದು ಬೆಳಿಗ್ಗೆ (ಜನವರಿ 15) 9:45ಕ್ಕೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಯಶವಂತಪುರದ ಬಳಿ ಇರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನ್ಯುಮೋನಿಯಾ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಶ್ವಾಸಕೋಶ ಸಂಬಂಧಿತ ಆರೋಗ್ಯ ಸಮಸ್ಯೆ ಉಂಟಾಗಿತ್ತು.

ಅಂತ್ಯಕ್ರಿಯೆ ನಾಳೆ (ಜನವರಿ 16) ಬೆಳಿಗ್ಗೆ 10 ರಿಂದ 12 ಗಂಟೆಯೊಳಗೆ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿ ಇರುವ ಚೀತಾಗಾರದಲ್ಲಿ ನಡೆಯಲಿದೆ. ವಿಜಿ ಅವರರಿಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಚಿತ್ರರಂಗದ ವ್ಯಕ್ತಿಗಳು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ವೈದ್ಯಕೀಯ ಚಿಕಿತ್ಸೆ ನಂತರ ಅವರು ಗುಣಮುಖರಾಗುತ್ತಾರೆ ಎಂಬ ನಿರೀಕ್ಷೆ ಇತ್ತು.
ವಿಜಿ ಅವರ ದೀರ್ಘ ಪಯಣ ನಾಟಕ ರಂಗಭೂಮಿ ಮೂಲಕ ಆರಂಭವಾಯಿತು. ಅವರು ನಟಿಸಿದ್ದ ‘ಸಂಸಾರದಲ್ಲಿ ಸರಿಗಮ’ ನಾಟಕದಿಂದಲೇ ಅವರಿಗೆ “ಸರಿಗಮ ವಿಜಿ” ಹೆಸರಾಯಿತು. ನಾಟಕದ ಯಶಸ್ಸಿನ ನಂತರ, ಚಿತ್ರರಂಗದಲ್ಲಿ ಪದಾರ್ಪಣೆ ಮಾಡಿದ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಪಾತ್ರ ಮತ್ತು ಕೆಲವೆಡೆ ವಿಲನ್ ಪಾತ್ರಗಳಲ್ಲಿ ನಟಿಸಿದರು.
‘ಬೆಳುವಲದ ಮಡಿಲಲ್ಲಿ’ ಚಿತ್ರದ ಮೂಲಕ ತಮ್ಮ ನಟನೆಯ ಪ್ರವೇಶ ಮಾಡಿದ್ದ ವಿಜಿ ಅವರು, 2018ರ ಹೊತ್ತಿಗೆ 269 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. 80 ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿಯೂ ಸೇವೆ ಸಲ್ಲಿಸಿದ್ದರು.
Veteran Kannada Actor Sarigama Viji Passes Away at 76