Israel-Iran War: ಇಸ್ರೇಲ್–ಇರಾನ್ ಯುದ್ಧ, ಐಆರ್‌ಜಿಸಿ ಮುಖ್ಯಸ್ಥ ಮೊಹಮ್ಮದ್ ಪಾಕ್‌ಪೂರ್ ಸಾವು
Israel-Iran War: ಇಸ್ರೇಲ್ ಕ್ಷಿಪಣಿ ದಾಳಿಗಳ ನಡುವೆ ಇರಾನ್ ಐಆರ್‌ಜಿಸಿ ಮುಖ್ಯಸ್ಥ ಮೊಹಮ್ಮದ್ ಪಾಕ್‌ಪೂರ್ ಹತ್ಯೆಯಾದರೆಂಬ ವರದಿ ಹೊರಬಿದ್ದಿದೆ. ಇರಾನ್ ಅಧಿಕೃತ ದೃಢೀಕರಣ ನೀಡದಿದ್ದರೂ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರವಾಗಿದೆ.

Israel-Iran War: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ತೀವ್ರ ಸೈನಿಕ ಸಂಘರ್ಷದ ನಡುವೆ ಮತ್ತೊಂದು ಸಂಚಲನಕಾರಿ ಮಾಹಿತಿ ಹೊರಬಿದ್ದಿದೆ. ಇಸ್ರೇಲ್ ನಡೆಸಿದ ಇತ್ತೀಚಿನ ಕ್ಷಿಪಣಿ ದಾಳಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಮುಖ್ಯಸ್ಥ ಮೊಹಮ್ಮದ್ ಪಾಕ್‌ಪೂರ್ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈ ಸುದ್ದಿಯನ್ನು ಇರಾನ್ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಐಆರ್‌ಜಿಸಿ ನಾಯಕತ್ವಕ್ಕೆ ದೊಡ್ಡ ಹೊಡೆತ?
ಪಾಕ್‌ಪೂರ್ ಕಳೆದ ಕೆಲ ತಿಂಗಳುಗಳಿಂದ ಐಆರ್‌ಜಿಸಿ ನೇತೃತ್ವ ವಹಿಸಿದ್ದರು. ಅವರನ್ನು ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ನೇಮಕ ಮಾಡಿದ್ದರು. ತಮ್ಮ ಅವಧಿಯಲ್ಲಿ ಸೈನಿಕ ಬಲವರ್ಧನೆಗೆ ಒತ್ತು ನೀಡಿದ್ದ ಅವರು, ಇತ್ತೀಚೆಗೆ ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದರು. “ಇರಾನ್ ಅನ್ನು ಕಡಿಮೆ ಅಂದಾಜು ಮಾಡಬೇಡಿ” ಎಂದು ಅವರು ಹೇಳಿದ್ದ ಮಾತುಗಳು ಚರ್ಚೆಗೆ ಗ್ರಾಸವಾಗಿದ್ದವು.
ಇಸ್ರೇಲ್ ದಾಳಿ ವೇಳೆ ಖಮೇನಿಯವರನ್ನೂ ಗುರಿಯಾಗಿಸಲು ಯತ್ನಿಸಲಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಅವರು ಸುರಕ್ಷಿತ ಸ್ಥಳದಲ್ಲಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಯುದ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇರಾನ್ ಉನ್ನತ ನಾಯಕತ್ವ ರಹಸ್ಯ ಪ್ರದೇಶಗಳಲ್ಲಿ ತಂಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಗಲ್ಫ್ ಪ್ರದೇಶದಲ್ಲಿ ಪ್ರತಿದಾಳಿ
ಇದರ ನಡುವೆ ಇರಾನ್ ಕೂಡ ಪ್ರತಿಕ್ರಿಯೆ ನೀಡಿದ್ದು, ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕಾ ಸೈನಿಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದರೆಂಬ ವರದಿಗಳು ಹೊರಬಂದಿವೆ. ಚಾಬಹಾರ್ ಬಂದರು ಪ್ರದೇಶದಲ್ಲೂ ಸ್ಫೋಟದ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಇಲ್ಲ.
ಇಸ್ರೇಲ್ ತನ್ನ ದಾಳಿಗೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಮಾಡಿದ್ದು, ಎರಡೂ ದೇಶಗಳ ನಡುವಿನ ಸಂಘರ್ಷ ಇನ್ನಷ್ಟು ವಿಸ್ತರಿಸುವ ಭೀತಿ ಹೆಚ್ಚಾಗಿದೆ. ಜಾಗತಿಕ ಸಮುದಾಯ ಪರಿಸ್ಥಿತಿಯನ್ನು ಕಣ್ಣಿಟ್ಟಿದೆ.



