ಬೆಂಗಳೂರು: ನಟಿ ರಮ್ಯಾಗೆ ಅವಹೇಳನ, 43 ಜನರ ವಿರುದ್ಧ ಎಫ್‌ಐಆರ್ ದಾಖಲು

ಅಭಿಮಾನಿಗಳ ಹೆಸರಿನಲ್ಲಿ ನಟಿ ರಮ್ಯಾಗೆ ಇನ್‌ಸ್ಟಾಗ್ರಾಂ ಮೂಲಕ ಅವಹೇಳನ, ಕೊಲೆ ಬೆದರಿಕೆ ಸಂದೇಶ. ಸಿಸಿಬಿಗೆ ತನಿಖೆ ಹಸ್ತಾಂತರ, 43 ಖಾತೆದಾರರ ವಿರುದ್ಧ ಎಫ್‌ಐಆರ್ ದಾಖಲು.

  • ನಟಿ ರಮ್ಯಾ ವಿರುದ್ಧ ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಸಂದೇಶ
  • 43 ಜನರ ವಿರುದ್ಧ ಸೈಬರ್ ಪೊಲೀಸರಿಂದ ಎಫ್‌ಐಆರ್
  • ಸಿಸಿಬಿಗೆ ಪ್ರಕರಣ ವರ್ಗಾವಣೆ, ಗಂಭೀರ ತನಿಖೆಗೆ ಆದೇಶ

ಬೆಂಗಳೂರು (Bengaluru): ನಟಿ ಹಾಗೂ ಮಾಜಿ ಸಂಸದೆ ರಮ್ಯಾ ವಿರುದ್ಧ (Kannada Actress Ramya) ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಅವಹೇಳನಕಾರಿ ಹಾಗೂ ಬೆದರಿಕೆಯ ಸಂದೇಶಗಳು ಹರಿದಾಡುತ್ತಿವೆ.

ದರ್ಶನ್ ಅಭಿಮಾನಿಗಳ ಹೆಸರಿನಲ್ಲಿ ಇವರ ಇನ್‌ಸ್ಟಾಗ್ರಾಂ ಖಾತೆಗೆ ಕೊಲೆ ಬೆದರಿಕೆ, ಲೈಂಗಿಕ ಟೀಕೆ ಸೇರಿದಂತೆ ಅಸಹನೀಯ ಮೆಸೆಜ್‌ಗಳು ಕಳುಹಿಸಲಾಗುತ್ತಿದ್ದು, ಈ ಸಂಬಂಧ ಅವರು ಬೆಂಗಳೂರಿನ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್‌ ಸಿಂಗ್ ಅವರನ್ನು ಭೇಟಿಯಾಗಿ ನಾಲ್ಕು ಪುಟಗಳ ದೂರನ್ನು ಸಲ್ಲಿಸಿದ್ದರು.

ಈ ದೂರಿನ ಆಧಾರದ ಮೇಲೆ ಒಟ್ಟು 43 ಖಾತೆಗಳ ವಿರುದ್ಧ ಸೈಬರ್‌ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ತಕ್ಷಣದ ಕ್ರಮವಾಗಿ, ಈ ಪ್ರಕರಣವನ್ನು ಸಿಸಿಬಿಗೆ ಹಸ್ತಾಂತರಿಸಿ, ಎಸಿಪಿ ಹುದ್ದೆಯ ಹಿರಿಯ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶಿಸಲಾಗಿದೆ.

ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ರಮ್ಯಾ ಅವರಿಂದ ಪಡೆದುಕೊಳ್ಳಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಈ ಸಂದೇಶಗಳನ್ನು ಕಳಿಸಿರುವವರ ಪತ್ತೆ ಕಾರ್ಯ ಕೂಡ ಆರಂಭವಾಗಿದೆ. ಸಿಸಿಬಿ ಈಗಾಗಲೇ ತನಿಖೆಯನ್ನು ಸಕ್ರಿಯಗೊಳಿಸಿದೆ.

ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಇದರಲ್ಲಿ ಕ್ರಿಮಿನಲ್ ಬೆದರಿಕೆ, ಲೈಂಗಿಕ ಕಿರುಕುಳ, ಮಹಿಳೆಯ ಗೌರವಕ್ಕೆ ಧಕ್ಕೆ ಮತ್ತು ಶಾಂತಿಭಂಗದ ಯತ್ನ ಸೇರಿವೆ.

ಇದರ ಹಿಂದಿನ ಹಿನ್ನೆಲೆ ಏನೆಂದರೆ, ನಟ ದರ್ಶನ್‌ ಅವರು ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ವಿರೋಧಿಸಿದ ತೀರ್ಪಿನ ಬಗ್ಗೆ ನಟಿ ರಮ್ಯಾ ತಮ್ಮ ‘ಎಕ್ಸ್’ ಖಾತೆಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಅದನ್ನು ಗಮನಿಸಿದ ಕೆಲ ಅಭಿಮಾನಿಗಳು ರಮ್ಯಾ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟೀಕೆ, ಬೈಗುಳ ಎತ್ತಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನಗರ ಪೊಲೀಸರು ಈಗ ಸಿಸಿಬಿ ಮೂಲಕ ತನಿಖೆ ನಡೆಸುತ್ತಿದ್ದು, ಆರೋಪಿಗಳ ಖಾತೆ ಮತ್ತು ಮೂಲ ಮಾಹಿತಿಯ ಹಿನ್ನಲೆಯಲ್ಲಿ ಹೆಚ್ಚಿನ ಆರೋಪಿಗಳನ್ನೂ ಶೀಘ್ರ ಪತ್ತೆ ಹಚ್ಚುವ ನಿರೀಕ್ಷೆಯಿದೆ.

43 Accounts Booked After Abusive Messages Sent to Actress Ramya

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories