ಬೆಂಗಳೂರು ಅಮೃತಹಳ್ಳಿ ವಿಲ್ಲಾ ಪಾರ್ಟಿ ಕೇಸ್: ಕಾರ್ಪೊರೇಟರ್ ಪುತ್ರ ಸೇರಿ ಮೂವರು ಬಂಧನ

ಅಮೃತಹಳ್ಳಿ ವಿಲ್ಲಾದಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿಖಿಲ್‌ಗೆ ಸಹಕರಿಸಿದ್ದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ಪುತ್ರ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿ, ಬಳಸಿದ್ದ ಕಾರನ್ನೂ ವಶಪಡಿಸಿಕೊಂಡಿದ್ದಾರೆ.

  • ಬೆಂಗಳೂರು ಅಮೃತಹಳ್ಳಿ ಅತ್ಯಾಚಾರ ಪ್ರಕರಣ
  • ಮಾಜಿ ಕಾರ್ಪೊರೇಟರ್ ಪುತ್ರ ಸೇರಿ ಮೂವರು ಬಂಧನ
  • ಪಾರ್ಟಿ ಕೇಸ್ನಲ್ಲಿ ಬಳಿಸಿದ್ದ ಫಾರ್ಚುನರ್ ಕಾರು ವಶಕ್ಕೆ

ಬೆಂಗಳೂರು (Bengaluru): ಬೆಂಗಳೂರು ನಗರವನ್ನು ಬೆಚ್ಚಿಬೀಳಿಸಿದ್ದ ಅಮೃತಹಳ್ಳಿ ವಿಲ್ಲಾ ಪಾರ್ಟಿ ಪ್ರಕರಣದಲ್ಲಿ ಪೊಲೀಸ್ ತನಿಖೆ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದೆ. ಈಗಾಗಲೇ ಪ್ರಮುಖ ಆರೋಪಿ ನಿಖಿಲ್ ಹಾಗೂ ಅವನ ಸಹಚರ ಡಿಕ್ಸನ್ ಬಂಧಿತರಾಗಿದ್ದರೆ, ಇದೀಗ ಮತ್ತೂ ಮೂವರನ್ನು ಪೊಲೀಸರು ಕಸ್ಟಡಿಗೆ ಪಡೆದು ಬಂಧಿಸಿದ್ದಾರೆ.

ತನಿಖೆ ವೇಳೆ ಹೊರಬಂದ ಮಾಹಿತಿಯ ಪ್ರಕಾರ, ನಿಖಿಲ್ ನಡೆಸುತ್ತಿದ್ದ ಪಾರ್ಟಿಗಳಿಗೆ ಈ ಮೂವರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದರು ಎನ್ನಲಾಗಿದೆ. ಅನಿರುದ್ಧ, ಶ್ರವಣ್ ಮತ್ತು ಮೋಹಿತ್ ಎಂಬವರನ್ನು ಪೊಲೀಸರು ವಿಚಾರಣೆ ನಡೆಸಿದ ನಂತರ ಬಂಧಿಸಿರುವುದಾಗಿ ತಿಳಿದುಬಂದಿದೆ.

ಒಂದೊಂದು ಆರೋಪಿಯದ್ದು ಒಂದೊಂದು ಪಾತ್ರ

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ನಿಖಿಲ್ ಪಾರ್ಟಿಯ ಮಾಸ್ಟರ್ ಮೈಂಡ್ ಆಗಿದ್ದರೆ, ಡಿಕ್ಸನ್ ಯುವತಿಯರನ್ನು ಸಂಪರ್ಕಿಸುವ ಜವಾಬ್ದಾರಿ ನೋಡಿಕೊಳ್ಳುತ್ತಿದ್ದನೆಂದು ಶಂಕೆ ವ್ಯಕ್ತವಾಗಿದೆ. ಅನಿರುದ್ಧ ವಿಲ್ಲಾ ಬುಕ್ಕಿಂಗ್ ಹಾಗೂ ಹಣದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗಿದೆ. ಶ್ರವಣ್ ಯುವತಿಯರನ್ನು ಸ್ಥಳಕ್ಕೆ ಕರೆತರುವ ಕೆಲಸ ಮಾಡುತ್ತಿದ್ದರೆ, ಮೋಹಿತ್ ಪಾರ್ಟಿಯಲ್ಲಿ ಭಾಗಿಯಾಗಿದ್ದನು.

ಅನಿರುದ್ಧ ದಾವಣಗೆರೆ ಮೂಲದ ಮಾಜಿ ಕಾರ್ಪೊರೇಟರ್ ಪುತ್ರನಾಗಿದ್ದು, ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆ ಪ್ರಕರಣ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

ಡ್ರಗ್ಸ್ ನೀಡಿ ಕಿರುಕುಳ ಆರೋಪ

ಸಂತ್ರಸ್ತೆಯ ದೂರಿನ ಪ್ರಕಾರ, ಪ್ರೇಮಿಗಳ ದಿನಾಚರಣೆ ಬಳಿಕ ನಡೆದ ಪಾರ್ಟಿಯ ನಂತರ ನಿಖಿಲ್ ತನ್ನ ಕಾರಿನಲ್ಲಿ ಯುವತಿಯನ್ನು ಕೂರಿಸಿಕೊಂಡು ಕಿರುಕುಳ ನೀಡಿದ್ದಾನೆ. ನಡೆದ ವಿಚಾರವನ್ನು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಬಳಸಲಾಗಿದ್ದ KA 05-NC 7299 ನೋಂದಣಿ ಸಂಖ್ಯೆಯ ಫಾರ್ಚುನರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫರೆನ್ಸಿಕ್ ಪರಿಶೀಲನೆಗಾಗಿ ಕಾರನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನೂ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂಬ ಸಾರ್ವಜನಿಕ ಒತ್ತಡದ ನಡುವೆ, ಪ್ರಕರಣ ಮುಂದಿನ ಹಂತಕ್ಕೆ ಸಾಗುತ್ತಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories