Bengaluru: ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಮತ್ತೆ ಹೆಚ್ಚಳ! ಒಂಟಿ ಮಹಿಳೆಯರೇ ಟಾರ್ಗೆಟ್

ನಗರದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಸರಗಳ್ಳತನ ಪ್ರಕರಣಗಳು ಮರುಕಳಿಸುತ್ತಿವೆ. ಬಾಗಲಗುಂಟೆ ಪ್ರದೇಶದಲ್ಲಿ 50 ಗ್ರಾಂ ಮಾಂಗಲ್ಯ ಕಿತ್ತುಕೊಂಡ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

  • ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಮತ್ತೆ ಹೆಚ್ಚಳ
  • ಬಾಗಲಗುಂಟೆಯಲ್ಲಿ 50 ಗ್ರಾಂ ಮಾಂಗಲ್ಯ ಕಳವು
  • ಚಿನ್ನದ ಬೆಲೆ ಏರಿಕೆ ಹಿನ್ನೆಲೆ ಸರಗಳ್ಳತನ  ಹೆಚ್ಚಳ

ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಮತ್ತೆ ಸರಗಳ್ಳರ ಭೀತಿ ತಲೆದೋರಿದೆ. ಚಿನ್ನದ ಬೆಲೆ ಗಗನಕ್ಕೇರಿರುವ ಈ ಹೊತ್ತಿನಲ್ಲಿ, ಹೆಲ್ಮೆಟ್ ಧರಿಸಿದ ಖದೀಮರು ಬೈಕ್‌ನಲ್ಲಿ ಬಂದು ಒಂಟಿಯಾಗಿ ಸಂಚರಿಸುವ ಮಹಿಳೆಯರನ್ನು ಗುರಿಯಾಗಿಸುತ್ತಿದ್ದಾರೆ. ನಗರ ನಿವಾಸಿಗಳು ಮತ್ತೆ ಆತಂಕದಲ್ಲಿದ್ದಾರೆ.

ಬಾಗಲಗುಂಟೆಯಲ್ಲಿ ನಡೆದ ಘಟನೆ

ರಾತ್ರಿ ಸುಮಾರು 8.30ರ ವೇಳೆಗೆ, ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿಡಿಯೋ ಸ್ಟಾಪ್ ಪ್ರದೇಶದ ಇಂದ್ರಾವತಿ ಎಂಬ ಮಹಿಳೆ ದಿನಸಿ ಅಂಗಡಿಯಿಂದ ಮನೆಗೆ ಮರಳುತ್ತಿದ್ದರು. ಇದೇ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮೊದಲಿಗೆ ಅವರನ್ನು ದಾಟಿ ಮುಂದೆ ಹೋಗಿದ್ದಾರೆ.

ಸುತ್ತಮುತ್ತ ಜನಸಂಚಾರ ಕಡಿಮೆ ಇರುವುದನ್ನು ಗಮನಿಸಿದ ಬಳಿಕ, ಹಠಾತ್ ಹಿಂದಿರುಗಿ ಇಂದ್ರಾವತಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತು ಪರಾರಿಯಾಗಿದ್ದಾರೆ.

ಘಟನೆಯಿಂದ ಬೆಚ್ಚಿಬಿದ್ದ ಇಂದ್ರಾವತಿ ಸಹಾಯಕ್ಕಾಗಿ ಕೂಗಿದರೂ, ಆರೋಪಿಗಳು ಕ್ಷಣಾರ್ಧದಲ್ಲಿ ಅಲ್ಲಿಂದ ನಾಪತ್ತೆಯಾಗಿದ್ದಾರೆ. “ಏನಾಗುತ್ತಿದೆ ಎನ್ನುವುದೇ ಅರ್ಥವಾಗಲಿಲ್ಲ. ಕ್ಷಣದಲ್ಲಿ ಸರ ಕಿತ್ತು ಓಡಿಹೋದರು” ಎಂದು ಅವರು ಆತಂಕಭರಿತವಾಗಿ ವಿವರಿಸಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಈ ಕೃತ್ಯದ ಸಂಪೂರ್ಣ ದೃಶ್ಯ ಸಮೀಪದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಇಬ್ಬರೂ ಹೆಲ್ಮೆಟ್ ಧರಿಸಿದ್ದರಿಂದ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ನಗರದಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ, ಪೊಲೀಸರು ಮಹಿಳೆಯರು ಒಂಟಿಯಾಗಿ ಸಂಚರಿಸುವಾಗ ಎಚ್ಚರಿಕೆಯಿಂದ ಇರಲು ಸಲಹೆ ನೀಡಿದ್ದಾರೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಕಡಿಮೆ ಜನಸಂಚಾರ ಇರುವ ರಸ್ತೆಗಳನ್ನ ತಪ್ಪಿಸಲು ಸೂಚಿಸಲಾಗಿದೆ.

ಚಿನ್ನದ ಬೆಲೆ ಏರಿಕೆಯಾಗಿರುವ ಈ ಸಂದರ್ಭದಲ್ಲಿ ಹಳೆಯ ಸರಗಳ್ಳರ ಗುಂಪುಗಳು ಮತ್ತೆ ಸಕ್ರಿಯವಾಗಿರುವ ಸಾಧ್ಯತೆ ಇದೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಸಾರ್ವಜನಿಕರು ಜಾಗರೂಕರಾಗಿದ್ದು, ಅನುಮಾನಾಸ್ಪದ ಚಲನವಲನ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Related Stories