ಬೆಂಗಳೂರು ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಡಿಸೆಂಬರ್ 5ರಿಂದ ಆರಂಭ
Kadalekai Parishe: ಬೆಂಗಳೂರು ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ ಡಿಸೆಂಬರ್ 5ರಿಂದ ಆರಂಭವಾಗಲಿದ್ದು, ನಾಲ್ಕು ದಿನಗಳ ಕಾಲ ನಡೆಯಲಿದೆ. ರೈತರು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗಾಗಿ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಜೊತೆಗೆ ಹಲವು ವಿಶೇಷ ಆಕರ್ಷಣೆಗಳು ಇರಲಿವೆ.

- ಡಿಸೆಂಬರ್ 5ರಿಂದ 8ರವರೆಗೆ ಜಾತ್ರೆ
- ಡಿಸೆಂಬರ್ 7ರಂದು ಪ್ರಮುಖ ಧಾರ್ಮಿಕ ಆಚರಣೆ
- ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ವಿಶೇಷ ಆದ್ಯತೆ
ಬೆಂಗಳೂರು (Bengaluru): ಬೆಂಗಳೂರಿನ ಜನರಿಗೆ ಡಿಸೆಂಬರ್ ತಿಂಗಳು ಬಂತೆಂದರೆ ಬಸವನಗುಡಿಯ ಕಡಲೆಕಾಯಿ ಪರಿಷೆಯ (Kadalekai Parishe) ನೆನಪು ಕಾಡುತ್ತದೆ. ನಗರದ ಹಳೆಯ ಸಂಪ್ರದಾಯವನ್ನು ಇಂದಿಗೂ ಜೀವಂತವಾಗಿಟ್ಟಿರುವ ಈ ಜಾತ್ರೆಗೆ ಈಗ ಸಿದ್ಧತೆಗಳು ಆರಂಭವಾಗಿವೆ. ಈ ಬಾರಿ ಡಿಸೆಂಬರ್ 5ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯಲಿದ್ದು, ಡಿಸೆಂಬರ್ 7ರಂದು ಪ್ರಮುಖ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.
ಜಾತ್ರೆಯ ದಿನಗಳಲ್ಲಿ ಬಸವನಗುಡಿ ಸುತ್ತಮುತ್ತಲಿನ ರಸ್ತೆಗಳು ಜನರಿಂದ ತುಂಬಿರಲಿವೆ. ಎಲ್ಲೆಡೆ ಕಡಲೆಕಾಯಿ ರಾಶಿಗಳು, ವ್ಯಾಪಾರಿಗಳ ಕೂಗು, ಬಣ್ಣಬಣ್ಣದ ಅಂಗಡಿಗಳು ಮತ್ತು ವಿದ್ಯುತ್ ದೀಪಗಳ ಅಲಂಕಾರ ಹಬ್ಬದ ವಾತಾವರಣ ಸೃಷ್ಟಿಸಲಿವೆ. ಮುಜರಾಯಿ ಇಲಾಖೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಂಟಿಯಾಗಿ ಈ ವರ್ಷದ ಪರಿಷೆಯನ್ನು ಆಯೋಜಿಸಲಿವೆ.
ಈ ಬಾರಿ ಕರ್ನಾಟಕದ ಹಲವು ಭಾಗಗಳಿಂದ ರೈತರು ಮತ್ತು ವ್ಯಾಪಾರಿಗಳು ಬಸವನಗುಡಿಗೆ ಬರಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ, ಮಂಡ್ಯ, ಮಾಗಡಿ, ಮೈಸೂರು, ಕುಣಿಗಲ್ ಮತ್ತು ತುಮಕೂರು ಭಾಗಗಳಿಂದ ವಿವಿಧ ಬಗೆಯ ಕಡಲೆಕಾಯಿ ಮಾರುಕಟ್ಟೆಗೆ ಬರಲಿದೆ. ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದ ವ್ಯಾಪಾರಿಗಳೂ ಭಾಗವಹಿಸಲಿದ್ದಾರೆ.
ಕಡಲೆಕಾಯಿ ಖರೀದಿಸುವುದರ ಜೊತೆಗೆ ಜಾತ್ರೆಯಲ್ಲಿ ಸಾಂಪ್ರದಾಯಿಕ ತಿಂಡಿಗಳನ್ನು ಸವಿಯುವ ಅವಕಾಶವೂ ಇರಲಿದೆ. ಹುರಿದ ಕಡಲೆಕಾಯಿ, ಹಸಿ ಕಡಲೆಕಾಯಿ, ಮಂಡಕ್ಕಿ, ಜಿಲೇಬಿ ಮತ್ತು ಬತ್ತಾಸು ಸೇರಿದಂತೆ ಹಲವು ತಿನಿಸುಗಳ ಮಳಿಗೆಗಳು ಗಮನ ಸೆಳೆಯಲಿವೆ. ಮಕ್ಕಳಿಗಾಗಿ ಆಟಿಕೆಗಳು, ಮಹಿಳೆಯರಿಗಾಗಿ ಬಳೆಗಳು, ಕಿವಿಯೋಲೆಗಳು ಸೇರಿದಂತೆ ವಿವಿಧ ವಸ್ತುಗಳ ಅಂಗಡಿಗಳೂ ಇರಲಿವೆ.
ಈ ಬಾರಿ ಜಾತ್ರೆಯನ್ನು ಸ್ವಚ್ಛವಾಗಿ ಮತ್ತು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಡೆಸಲು ಅಧಿಕಾರಿಗಳು ಯೋಜಿಸಿದ್ದಾರೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ, ಪರಿಸರ ಸ್ನೇಹಿ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣ, ಭದ್ರತೆ ಮತ್ತು ಸ್ವಚ್ಛತೆಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.
ಇನ್ನು ಈ ವರ್ಷದ ಪರಿಷೆಯಲ್ಲಿ ಕಡಲೆಕಾಯಿ ಖರೀದಿಸುವವರಿಗೆ ಬೆಲೆ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯೂ ಇದೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬೆಳೆ ಇಳುವರಿ ಕಡಿಮೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಸದ್ಯ ಕಾಲು ಲೀಟರ್ ಅಳತೆಯ ಕಡಲೆಕಾಯಿ ಸುಮಾರು 20ರಿಂದ 25 ರೂಪಾಯಿಗೆ ಮಾರಾಟವಾಗುತ್ತಿದ್ದು, ಜಾತ್ರೆಯ ವೇಳೆಗೆ ದರ ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯಿದೆ.
ಕಡಲೆಕಾಯಿ ಪರಿಷೆ ಎಂದರೆ ಕೇವಲ ಖರೀದಿ ಮತ್ತು ಮಾರಾಟದ ಜಾತ್ರೆಯಲ್ಲ. ರೈತರು ತಾವು ಬೆಳೆದ ಮೊದಲ ಫಸಲನ್ನು ಬಸವಣ್ಣನಿಗೆ ಅರ್ಪಿಸಿ ಆಶೀರ್ವಾದ ಪಡೆಯುವ ವಿಶೇಷ ಸಂಪ್ರದಾಯ ಇದರ ಹಿಂದಿದೆ. ಕೃಷಿ ಬದುಕು ಮತ್ತು ಧಾರ್ಮಿಕ ನಂಬಿಕೆಯೊಂದಿಗೆ ಬೆಸೆದುಕೊಂಡಿರುವ ಈ ಆಚರಣೆ ಬೆಂಗಳೂರಿನ ಸಾಂಸ್ಕೃತಿಕ ಗುರುತಿನಲ್ಲೊಂದು.
ಹೀಗಾಗಿ ಈ ಬಾರಿಯೂ ಸಾವಿರಾರು ಜನರು ಬಸವನಗುಡಿಯತ್ತ ಹೆಜ್ಜೆ ಹಾಕುವ ನಿರೀಕ್ಷೆಯಿದೆ. ಕಡಲೆಕಾಯಿ ಪರಿಷೆಯ ಸಂಭ್ರಮಕ್ಕೆ ಬೆಂಗಳೂರು ಮತ್ತೊಮ್ಮೆ ಸಜ್ಜಾಗುತ್ತಿದೆ.



