ಅಪಘಾತ, ನಾಪತ್ತೆ ಪ್ರಕರಣಗಳ ಆತಂಕ; ಪೊಲೀಸ್ ಠಾಣೆಯಲ್ಲೇ ಗಣಪತಿ ಹೋಮ ಮಾಡಿಸಿದ ಇನ್‌ಸ್ಪೆಕ್ಟರ್!

ಕಾಣೆಯಾದ ಬಾಲಕಿಯ ಪ್ರಕರಣದ ತನಿಖೆ ನಡುವೆ ಇನ್‌ಸ್ಪೆಕ್ಟರ್ ಪೊಲೀಸ್ ಠಾಣೆಯಲ್ಲೇ ಪತ್ನಿಯೊಂದಿಗೆ ಗಣಪತಿ ಹೋಮ ನಡೆಸಿದ್ದು, ವಿಡಿಯೋ ವೈರಲ್ ಆದ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಟೀಕೆಗಳು ಕೇಳಿಬಂದಿವೆ.

ಪೊಲೀಸ್ ಠಾಣೆಗಳಲ್ಲಿ ಸಾಮಾನ್ಯವಾಗಿ ದೂರುಗಳ ವಿಚಾರಣೆ, ಪ್ರಕರಣಗಳ ತನಿಖೆ ನಡೆಯುತ್ತದೆ. ಆದರೆ ತಮಿಳುನಾಡಿನ (Tamil Nadu) ಒಂದು ಪೊಲೀಸ್ ಠಾಣೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸ್ವತಃ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ತಮ್ಮ ಪತ್ನಿಯೊಂದಿಗೆ ಠಾಣೆಯೊಳಗೆ ಗಣಪತಿ ಹೋಮ (Ganapati Homa) ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ.

ವಿಲ್ಲುಪುರಂ ಜಿಲ್ಲೆಯ ಸತ್ಯಮಂಗಲಂ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಠಾಣೆಯ ಇನ್‌ಸ್ಪೆಕ್ಟರ್ ಸುರೇಶ್ ಬಾಬು ಇತ್ತೀಚೆಗೆ ಅಪಘಾತಕ್ಕೆ ಒಳಗಾಗಿದ್ದರು. ಮತ್ತೊಂದೆಡೆ, ಠಾಣೆ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ಹಲವು ಅಹಿತಕರ ಘಟನೆಗಳು ನಡೆದಿದ್ದವು. ಎರಡು ತಿಂಗಳ ಹಿಂದೆ ಬಾಲಕಿಯೊಬ್ಬಳು ಕಾಣೆಯಾಗಿದ್ದ ಪ್ರಕರಣವೂ ಪೊಲೀಸರಿಗೆ ಸವಾಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಕೆಲವರ ಸಲಹೆಯಂತೆ ಇನ್‌ಸ್ಪೆಕ್ಟರ್ ಹೋಮ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಪೂಜೆಯಲ್ಲಿ ಇನ್‌ಸ್ಪೆಕ್ಟರ್ ಸುರೇಶ್ ಬಾಬು ಅವರ ಪತ್ನಿ ಮಾತ್ರವಲ್ಲದೆ, ಠಾಣೆಯ ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳೂ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿದ್ದಂತೆ ವಿವಾದ ಶುರುವಾಗಿದೆ.

ಇನ್ನು ಈ ಠಾಣೆಯಲ್ಲಿ ದಾಖಲಾಗಿದ್ದ ಬಾಲಕಿ ನಾಪತ್ತೆ ಪ್ರಕರಣವೂ ಸಾಕಷ್ಟು ಗಮನ ಸೆಳೆದಿದೆ. ವಿಲ್ಲುಪುರಂ ಜಿಲ್ಲೆಯ ನಡುಪಟ್ಟು ಗ್ರಾಮದ ಎರಡನೇ ತರಗತಿ ವಿದ್ಯಾರ್ಥಿನಿ ಎರಡು ತಿಂಗಳ ಹಿಂದೆ ಮನೆಯಿಂದ ಕಾಣೆಯಾಗಿದ್ದಳು. ಪೋಷಕರು ಸತ್ಯಮಂಗಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಾಟ ನಡೆಸಿದರೂ ಬಾಲಕಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿ-ಸಿಐಡಿಗೆ (CB-CID) ವರ್ಗಾಯಿಸಲಾಗಿತ್ತು.

ಪೊಲೀಸ್ ಠಾಣೆಯಲ್ಲಿನ ಈ ಧಾರ್ಮಿಕ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ಡಿಎಂಕೆ (DMK) ನಾಯಕ ಸೆಂಥಿಲ್‌ಕುಮಾರ್, ಮುಖ್ಯಮಂತ್ರಿ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಜ್ಯೋತಿಷಿಗಳ ಸಲಹೆಯಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪಗಳಿರುವಾಗ ಇಂತಹ ಘಟನೆಗಳಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಹಿರಿಯ ಅಧಿಕಾರಿಗಳು, ಠಾಣೆಯೊಳಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ತನಿಖೆ ಆರಂಭಿಸಲಾಗಿದ್ದು, ನಿಯಮ ಉಲ್ಲಂಘಿಸಿರುವುದು ದೃಢಪಟ್ಟರೆ ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories