ಹಂತಕನ ಹಿಡಿದುಕೊಟ್ಟ ಚಿನ್ನದ ಉಂಗುರ! ಕೊನೆಗೂ ಕೊಲೆ ಪ್ರಕರಣ ಬಯಲು
ತಮಿಳುನಾಡಿನ ನಾಗರ್‌ಕೋಯಿಲ್‌ನಲ್ಲಿ ಮಹಿಳೆಯ ಕೊಲೆ ಪ್ರಕರಣಕ್ಕೆ ಉಂಗುರದ ಹಾಲ್‌ಮಾರ್ಕ್ ಸುಳಿವು ನೀಡಿತು. ಆಭರಣದ ಮಾರಾಟದ ಮಾಹಿತಿ, ಸಿಸಿಟಿವಿ ದೃಶ್ಯಗಳು ಮತ್ತು ಪೊಲೀಸರ ವಿಚಾರಣೆಯಿಂದ ಆರೋಪಿಯನ್ನು ಆರು ಗಂಟೆಗಳಲ್ಲಿ ಬಂಧಿಸಲಾಗಿದೆ.

ತಮಿಳುನಾಡಿನ (Tamil Nadu) ಕನ್ಯಾಕುಮಾರಿ ಜಿಲ್ಲೆಯ ನಾಗರ್‌ಕೋಯಿಲ್ ರೈಲ್ವೆ ಯಾರ್ಡ್‌ನಲ್ಲಿ ನಿಲ್ಲಿಸಿದ್ದ ಹಳೆಯ ರೈಲು ಬೋಗಿಯೊಳಗೆ 54 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಈ ತಿಂಗಳ 13ರಂದು ನಡೆದ ಘಟನೆ ಸ್ಥಳೀಯವಾಗಿ ಆತಂಕ ಮೂಡಿಸಿತ್ತು. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಆರಂಭದಲ್ಲಿ ಪೊಲೀಸರಿಗೆ ಆರೋಪಿಯ ಬಗ್ಗೆ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿರಲಿಲ್ಲ. ಆದರೆ ಮಹಿಳೆಯ ಕೈಯಲ್ಲಿದ್ದ ಪಾಮ್ ಆಕಾರದ ವಿನ್ಯಾಸದ ಬಂಗಾರದ ಉಂಗುರ (Gold Ring) ತನಿಖೆಗೆ ಮಹತ್ವದ ತಿರುವು ನೀಡಿತು. ಅದರ ಮೇಲಿದ್ದ ಹಾಲ್‌ಮಾರ್ಕ್ ಗುರುತುಗಳನ್ನು ಪರಿಶೀಲಿಸಿದಾಗ, ಉಂಗುರವನ್ನು ಗುಜರಾತ್‌ನಲ್ಲಿ ಮಾರಾಟ ಮಾಡಿರುವುದು ಗೊತ್ತಾಯಿತು.
ಅಲ್ಲಿನ ಮಾರಾಟಗಾರನ ವಿಚಾರಣೆ ನಡೆಸಿದ ಪೊಲೀಸರು, ಆಭರಣವನ್ನು ಛತ್ತೀಸ್‌ಗಢದ (Chhattisgarh) ರಾಯ್‌ಪುರದ ಚಿಲ್ಲರೆ ವ್ಯಾಪಾರಿಗೆ ಕಳುಹಿಸಿರುವ ಮಾಹಿತಿ ಪಡೆದರು. ನಂತರ ಆ ವ್ಯಾಪಾರಿಯನ್ನು ಸಂಪರ್ಕಿಸಿ, ಮಹಿಳೆಯ ಪ್ಯಾನ್ (PAN) ವಿವರಗಳು ಮತ್ತು ಆಭರಣ ಖರೀದಿಸುವಾಗ ನೀಡಿದ್ದ ಮಧ್ಯಪ್ರದೇಶದ ವಿಳಾಸವನ್ನು ಪತ್ತೆಹಚ್ಚಿದರು.
ಆ ವಿಳಾಸದ ಮೂಲಕ ಮಹಿಳೆಯ ಕುಟುಂಬವನ್ನು ಗುರುತಿಸಿದಾಗ, ಅವರು ಸುಮಾರು ಮೂರು ತಿಂಗಳ ಹಿಂದೆಯೇ ಮನೆ ಬಿಟ್ಟು ಹೋಗಿದ್ದ ಸಂಗತಿ ತಿಳಿದುಬಂದಿದೆ. ಮಹಿಳೆಯ ಸಾವಿನ ಸುದ್ದಿ ತಿಳಿದ ಬಳಿಕ ಆಕೆಯ ಪತಿ ಮತ್ತು ಮಕ್ಕಳು ಕನ್ಯಾಕುಮಾರಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ರೈಲ್ವೆ ನಿಲ್ದಾಣದ ಸಿಸಿಟಿವಿ (CCTV) ದೃಶ್ಯಗಳನ್ನೂ ಪೊಲೀಸರು ಪರಿಶೀಲಿಸಿದ್ದರು. ಆರಂಭದಲ್ಲಿ ಮೂವರು ಶಂಕಿತರನ್ನು ಗುರುತಿಸಲಾಗಿತ್ತು. ಈ ವೇಳೆ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ರೈಲು ಬೋಗಿಯಿಂದ ಹೊರಬರುತ್ತಿರುವ ದೃಶ್ಯ ತನಿಖೆಗೆ ನೆರವಾಯಿತು. ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಹಿಂದೆ ಆತ ಮಹಿಳೆಯನ್ನು ಕೆಲವು ಬಾರಿ ಭೇಟಿಯಾಗಿದ್ದಿರಬಹುದು ಎಂಬ ಅನುಮಾನವೂ ಪೊಲೀಸರಿಗಿದೆ. ಆತ ಧರಿಸಿದ್ದ ರಕ್ತದ ಕಲೆಗಳಿರುವ ಅಂಗಿಯನ್ನು ಕಾಲುವೆಗೆ ಎಸೆದಿರಬಹುದು ಎಂದು ಶಂಕಿಸಲಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಹಲ್ಲೆ ನಡೆಸಿ ಎದೆಗೆ ಒದ್ದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎಂದು ಆರೋಪಿ ಒಪ್ಪಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸಾವಿನ ನಿಖರ ಕಾರಣ ಮತ್ತು ಲೈಂಗಿಕ ದೌರ್ಜನ್ಯದ ಅಂಶವನ್ನು ದೃಢಪಡಿಸಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ತನಿಖೆಯನ್ನು ವೇಗವಾಗಿ ಪೂರ್ಣಗೊಳಿಸಿ ಆರೋಪಿಯನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ತಮಿಳುನಾಡು ರೈಲ್ವೆ ಡಿಜಿಪಿ ಕೆ. ವನ್ನಿಯಾ ಪೆರುಮಾಳ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿಯ ಕಾರ್ಯವನ್ನು ಅವರು ಶ್ಲಾಘಿಸಿದ್ದಾರೆ.



