ಪಕ್ಷದ ಸಹಚರನ ಅಗಲಿಕೆ, ಸ್ವತಃ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ತಮಿಳುನಾಡು ಸಿಎಂ ವಿಜಯ್
ತಮ್ಮ ಪಕ್ಷದ ಶಾಸಕ ವಿಎಸ್ ಬಾಬು ಅವರ ಅಂತಿಮ ಯಾತ್ರೆಯಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಸ್ವತಃ ಹೆಗಲು ಕೊಟ್ಟರು. ಪಕ್ಷದ ಸಹಚರನ ಅಗಲಿಕೆಯಿಂದ ದುಃಖಿತರಾದ ಅವರು, ನಿವಾಸದಿಂದ ಅಂತ್ಯಕ್ರಿಯೆಯ ವಾಹನದವರೆಗೆ ಪಾರ್ಥಿವ ಶರೀರವನ್ನು ಹೊತ್ತು ಸಾಗಿದರು.

- ಶಾಸಕ ಬಾಬು ನಿಧನಕ್ಕೆ ವಿಜಯ್ ಸಂತಾಪ
- ಅಂತಿಮ ಯಾತ್ರೆಯಲ್ಲಿ ಸ್ವತಃ ಭಾಗಿ
- ಪಾರ್ಥಿವ ಶರೀರಕ್ಕೆ ಹೆಗಲು ನೀಡಿದ ಸಿಎಂ
ತಮಿಳುನಾಡಿನ ರಾಜಕೀಯ ವಲಯದಲ್ಲಿ ಗಮನ ಸೆಳೆದಿರುವ ಘಟನೆ ಇದಾಗಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಶಾಸಕ ವಿఎಸ್ ಬಾಬು ಅವರ ಅಂತಿಮ ಸಂಸ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷ ಜೋಸೆಫ್ ವಿಜಯ್ (Joseph Vijay) ಪಾಲ್ಗೊಂಡು ಗೌರವ ಸಲ್ಲಿಸಿದರು.
ಪೆರಂಬೂರಿನಲ್ಲಿರುವ ಬಾಬು ಅವರ ನಿವಾಸದಿಂದ ಅಂತಿಮ ಯಾತ್ರೆಗೆ ಸಿದ್ಧಪಡಿಸಿದ್ದ ವಾಹನದವರೆಗೆ ವಿಜಯ್ ಮತ್ತಿತರ ಮೂವರೊಂದಿಗೆ ಸೇರಿ ಪಾರ್ಥಿವ ಶರೀರವನ್ನು ಹೆಗಲ ಮೇಲೆ ಹೊತ್ತು ಸಾಗಿದರು. ಈ ಮೂಲಕ ಅಗಲಿದ ಪಕ್ಷದ ನಾಯಕನಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.
ದೀರ್ಘಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಬು ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅವರ ನಿಧನದ ಸುದ್ದಿ ತಿಳಿದ ಬಳಿಕ ವಿಜಯ್ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದಿದ್ದರು. ಶುಕ್ರವಾರ ನಡೆದ ಅಂತ್ಯಕ್ರಿಯೆಯಲ್ಲಿಯೂ ಭಾಗವಹಿಸಿದ್ದರು.
ಬಾಬು ಅವರ ರಾಜಕೀಯ ಪಯಣವೂ ಸಾಕಷ್ಟು ಕುತೂಹಲಕಾರಿಯಾಗಿದೆ. ಈ ಹಿಂದೆ ಡಿಎಂಕೆ (DMK), ಎಐಎಡಿಎಂಕೆ (AIADMK) ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದ ಅವರು, ಈ ವರ್ಷದ ಆರಂಭದಲ್ಲಿ ಟಿವಿಕೆಗೆ ಸೇರ್ಪಡೆಯಾಗಿದ್ದರು.
ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ, ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M.K. Stalin) ಅವರನ್ನು ಸೋಲಿಸಿದ್ದರು. ಇದೀಗ ಅವರ ನಿಧನ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ದುಃಖ ಮೂಡಿಸಿದೆ.



