ಅಣ್ಣನಾಗಿ ನಿಮ್ಮಲ್ಲಿ ಮನವಿ, ಪ್ರತಿಭಟನೆ ಹಿಂಪಡೆಯಿರಿ; ಆಶಾ ಕಾರ್ಯಕರ್ತೆಯರಿಗೆ ಡಿಕೆಶಿ ಭಾವನಾತ್ಮಕ ಸಂದೇಶ
ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಐದನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಹೋರಾಟ ಹಿಂಪಡೆಯುವಂತೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಬೇಡಿಕೆಗಳ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ನೀಡುವ ಭರವಸೆಯನ್ನೂ ನೀಡಿದ್ದಾರೆ.

- ಐದನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ
- ಸಹೋದರಿಯರೆಂದು ಭಾವನಾತ್ಮಕ ಮನವಿ
- 15 ಸಾವಿರ ರೂ. ಗೌರವಧನಕ್ಕೆ ಒತ್ತಾಯ
ಬೆಂಗಳೂರು (Bengaluru) ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ಮುಂದುವರಿದಿದೆ. ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದ್ದರೂ ಸರ್ಕಾರದ ಭರವಸೆಗೆ ಕಾರ್ಯಕರ್ತೆಯರು ಒಪ್ಪಿಗೆ ಸೂಚಿಸಿಲ್ಲ. ಲಿಖಿತ ಆದೇಶ ಹೊರಡಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂಬ ನಿಲುವಿಗೆ ಅವರು ಬದ್ಧರಾಗಿದ್ದಾರೆ.
ಈ ನಡುವೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು ತಮ್ಮ ಪಾಲಿಗೆ ಕೇವಲ ಸಿಬ್ಬಂದಿಯಲ್ಲ, ಸಹೋದರಿಯರಿದ್ದಂತೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕುಟುಂಬವನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಪ್ರತಿಭಟನೆ ನಡೆಸುತ್ತಿರುವುದನ್ನು ಕಂಡು ನೋವಾಗುತ್ತಿದೆ. ಅವರ ಕಷ್ಟ ಮತ್ತು ಹೋರಾಟದ ಹಿಂದಿನ ಕಾರಣಗಳು ತಮಗೆ ಅರ್ಥವಾಗುತ್ತವೆ ಎಂದು ತಿಳಿಸಿದ್ದಾರೆ.
ಕಾರ್ಯಕರ್ತೆಯರ ಬೇಡಿಕೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಸಚಿವ ಸಂಪುಟದ (Cabinet) ಜೊತೆ ಚರ್ಚಿಸಿ ಸಮಗ್ರ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಪ್ರಯತ್ನಿಸಲಿದೆ ಎಂದು ಡಿಕೆಶಿ ಭರವಸೆ ನೀಡಿದ್ದಾರೆ. ಅವರ ಸೇವೆ, ಶ್ರಮ ಮತ್ತು ತ್ಯಾಗವನ್ನು ಸರ್ಕಾರ ಗೌರವಿಸುತ್ತದೆ. ಒಬ್ಬ ಅಣ್ಣನ ಮನವಿಯಂತೆ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ.
ಆದರೆ, ಕಾರ್ಯಕರ್ತೆಯರ ಪ್ರಮುಖ ಬೇಡಿಕೆಗಳು ಇನ್ನೂ ಈಡೇರಿಲ್ಲ. ಪ್ರತಿ ತಿಂಗಳು 15 ಸಾವಿರ ರೂಪಾಯಿ ನಿಗದಿತ ಗೌರವಧನ, ನಿವೃತ್ತಿ ಸಂದರ್ಭದಲ್ಲಿ 5 ಲಕ್ಷ ರೂಪಾಯಿ ಸೌಲಭ್ಯ ಹಾಗೂ ಸಮಸ್ತ ಆ್ಯಪ್ (Samastha App) ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ.
ಈ ಹಿಂದೆ ಸಂಘಟನೆಯ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿಯೂ ಬೇಡಿಕೆಗಳ ಕುರಿತು ಚರ್ಚಿಸುವ ಭರವಸೆ ನೀಡಲಾಗಿತ್ತು. ಆದರೂ ಲಿಖಿತ ಭರವಸೆ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಕಾರ್ಯಕರ್ತೆಯರು ಸ್ಪಷ್ಟಪಡಿಸಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಅವರ ಹೊಸ ಮನವಿಗೆ ಪ್ರತಿಭಟನಾಕಾರರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಆಶಾ ಸಹೋದರಿಯರಲ್ಲಿ ಸರ್ಕಾರದ ಪರವಾಗಿ ನನ್ನ ಕಳಕಳಿಯ ಮನವಿ…
ನಿಮ್ಮ ಬೇಡಿಕೆಗಳಿಗಾಗಿ ನೀವು ನಡೆಸುತ್ತಿರುವ ಹೋರಾಟದ ನೋವು ಮತ್ತು ಸಂಕಷ್ಟ ನನಗೆ ಅರ್ಥವಾಗುತ್ತದೆ. ನಿಮ್ಮ ಕುಟುಂಬದವರನ್ನು ಬಿಟ್ಟು ಹಗಲು-ರಾತ್ರಿ ಎನ್ನದೆ ಹೋರಾಟ ಮಾಡುತ್ತಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ನೀವು ನನಗೆ ಕೇವಲ ಆಶಾ ಕಾರ್ಯಕರ್ತೆಯರಲ್ಲ, ನನ್ನ ಸಹೋದರಿಯರಿದ್ದಂತೆ.
ಅಂಗನವಾಡಿಗಳ ಸ್ಥಾಪನೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆರಂಭ ಹಾಗೂ ಆಶಾ ಕಾರ್ಯಕರ್ತೆಯರ ಹುದ್ದೆಗಳ ಸೃಷ್ಟಿಯ ಮೂಲಕ ಮಹಿಳೆಯರು ಮತ್ತು ಆರೋಗ್ಯ ಕ್ಷೇತ್ರದ ಕಾರ್ಯಕರ್ತೆಯರಿಗೆ ಸೇವೆಯ ಅವಕಾಶ ಕಲ್ಪಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ.
ನಿಮ್ಮ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸಮಗ್ರ ಮತ್ತು ಶಾಶ್ವತ ಪರಿಹಾರ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ. ಸಂಪುಟದ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ನಿಮ್ಮೊಂದಿಗೆ ನಾವಿದ್ದೇವೆ. ಒಬ್ಬ ಅಣ್ಣನಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದಯವಿಟ್ಟು ನನ್ನ ಮನವಿಗೆ ಸ್ಪಂದಿಸಿ, ಹೋರಾಟವನ್ನು ಕೈಬಿಡಿ. ನಿಮ್ಮ ಸೇವೆ, ಶ್ರಮ ಮತ್ತು ತ್ಯಾಗವನ್ನು ನಾವು ಗೌರವಿಸುತ್ತೇವೆ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸಿ, ಸೂಕ್ತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ.
— DK Shivakumar (@DKShivakumar) November 21, 2026




