Bengaluru Spa & Massage Parlours । ಬೆಂಗಳೂರು ಸ್ಪಾ ಹಾಗೂ ಮಸಾಜ್ ಪಾರ್ಲರ್‌ಗಳ ಮೇಲೆ ಏಕಕಾಲದಲ್ಲಿ ಪೊಲೀಸರ ದಾಳಿ
Bengaluru Spa & Massage Parlours: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಸಾಜ್ ಮತ್ತು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ಏಕಕಾಲದಲ್ಲಿ ತಪಾಸಣೆ ನಡೆಸಿದ್ದಾರೆ. ವಿವಿಧ ನಿಯಮಗಳ ಪಾಲನೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ 16 ಪಾರ್ಲರ್‌ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

- 191 ಸ್ಪಾ ಕೇಂದ್ರಗಳಲ್ಲಿ ಪೊಲೀಸರಿಂದ ತಪಾಸಣೆ
- ನಿಯಮ ಉಲ್ಲಂಘಿಸಿದ 16 ಪಾರ್ಲರ್‌ಗಳಿಗೆ ನೋಟಿಸ್
- ಸಿಸಿಟಿವಿ ಮತ್ತು ಸಿಬ್ಬಂದಿ ದಾಖಲೆ ಪರಿಶೀಲನೆ
ಬೆಂಗಳೂರು (Bengaluru): ರಾಜಧಾನಿಯ ಮಸಾಜ್ ಮತ್ತು ಸ್ಪಾ ಕೇಂದ್ರಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇಡಲು ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಪೂರ್ವ ವಿಭಾಗದ 11 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಪರಿಶೀಲನೆ ಕೈಗೊಂಡಿದ್ದು, ಒಟ್ಟು 191 ಸ್ಪಾ ಮತ್ತು ಮಸಾಜ್ ಪಾರ್ಲರ್‌ಗಳನ್ನು ತಪಾಸಣೆ ಮಾಡಲಾಗಿದೆ.
ಈ ಕಾರ್ಯಾಚರಣೆಯಲ್ಲಿ ನಿಯಮಗಳ ಪಾಲನೆಯಲ್ಲಿ ಲೋಪ ಕಂಡುಬಂದ 16 ಪಾರ್ಲರ್‌ಗಳಿಗೆ ಪೊಲೀಸರು ನೋಟಿಸ್ (Notice) ನೀಡಿದ್ದಾರೆ. ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಅವರ ಸೂಚನೆಯಂತೆ ಈ ದಿಢೀರ್ ಪರಿಶೀಲನೆ ನಡೆಸಲಾಗಿದೆ.
ತಪಾಸಣೆ ವೇಳೆ ಕೇವಲ ಪಾರ್ಲರ್‌ಗಳ ಕಾರ್ಯನಿರ್ವಹಣೆಗೆ ಸೀಮಿತವಾಗದೆ, ಅಲ್ಲಿನ ಸುರಕ್ಷತಾ ವ್ಯವಸ್ಥೆ ಹಾಗೂ ಸಿಬ್ಬಂದಿಗೆ ಸಂಬಂಧಿಸಿದ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸಿದ್ದಾರೆ. ವಿಶೇಷವಾಗಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು (CCTV Cameras) ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.
As part of a special enforcement drive, @DcpEastBcp conducted surprise inspections at spas across East Division through 27 teams led by Police Inspectors from five police stations to check compliance and detect illegal activities. https://t.co/2lYPySnywK
— DCP EAST (@DcpEastBcp) November 28, 2026
ಇದರ ಜತೆಗೆ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಗುರುತಿನ ಚೀಟಿ, ವಾಸದ ವಿಳಾಸ ಮತ್ತು ಇತರ ವಿವರಗಳನ್ನು ಪರಿಶೀಲಿಸಲಾಗಿದೆ. ಪಾರ್ಲರ್‌ಗೆ ಭೇಟಿ ನೀಡುವ ಗ್ರಾಹಕರ ಮಾಹಿತಿಯನ್ನು ದಾಖಲಿಸುವ ಲೆಡ್ಜರ್ ಪುಸ್ತಕಗಳನ್ನೂ ಪೊಲೀಸರು ಪರಿಶೀಲನೆಗೆ ಒಳಪಡಿಸಿದ್ದಾರೆ.
ನಗರದಲ್ಲಿ ಸ್ಪಾ ಕೇಂದ್ರಗಳ ಹೆಸರಿನಲ್ಲಿ ನಡೆಯಬಹುದಾದ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಹಾಗೂ ನಿಯಮಬದ್ಧವಾಗಿ ವ್ಯವಹಾರ ನಡೆಸುವುದನ್ನು ಖಚಿತಪಡಿಸಿಕೊಳ್ಳುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.
ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಮುಂದಿನ ಹಂತದಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಇತರ ಸ್ಪಾ ಮತ್ತು ಮಸಾಜ್ ಕೇಂದ್ರಗಳಲ್ಲೂ ನಿಯಮ ಪಾಲನೆ ಕುರಿತು ಎಚ್ಚರಿಕೆ ಹೆಚ್ಚಾಗಿದೆ.



