ನೈಟ್‌ ಲೈಫ್‌ನಲ್ಲಿ ಮಹಿಳೆಯರಿಗೆ ಬೆಂಗಳೂರು ಸೇಫ್; ಪೊಲೀಸ್ ಆಯುಕ್ತರ ಮಹತ್ವದ ಮಾಹಿತಿ

ರಾತ್ರಿ ಸಿನಿಮಾ ಪ್ರದರ್ಶನಗಳಿಗೆ ಮಹಿಳೆಯರು ಹೆಚ್ಚು ಟಿಕೆಟ್ ಬುಕ್ ಮಾಡುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಮಹಿಳೆಯರ ಸುರಕ್ಷತೆ ಕುರಿತು ಪೊಲೀಸ್ ಆಯುಕ್ತರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು (Bengaluru) ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂಬ ಚರ್ಚೆಗಳ ನಡುವೆ ನಗರ ಪೊಲೀಸ್ ಇಲಾಖೆಯಿಂದ ಗಮನ ಸೆಳೆಯುವ ಮಾಹಿತಿ ಹೊರಬಿದ್ದಿದೆ. ತಡರಾತ್ರಿ ಸಿನಿಮಾ ಪ್ರದರ್ಶನಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಮಹಿಳೆಯರು ಹೆಚ್ಚು ಟಿಕೆಟ್ ಕಾಯ್ದಿರಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂದು ನೂತನ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

ಮೇಕ್ ಮೈ ಟ್ರಿಪ್ (MakeMyTrip) ಸಂಸ್ಥೆಯ ದತ್ತಾಂಶವನ್ನು ಉಲ್ಲೇಖಿಸಿರುವ ಅವರು, ಬೆಂಗಳೂರಿನ ಮಹಿಳೆಯರು ತಡರಾತ್ರಿಯಲ್ಲೂ ಸಿನಿಮಾ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹ ಸಂಗತಿ ಎಂದು ಹೇಳಿದ್ದಾರೆ. ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನವೆಂಬರ್ 18ರಂದು ಬೆಂಗಳೂರಿನ ಮುಖ್ಯ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಆರ್. ಹಿತೇಂದ್ರ, ಮಹಿಳೆಯರ ಸುರಕ್ಷತೆಯನ್ನು ಪೊಲೀಸ್ ಇಲಾಖೆಯ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿ ಪರಿಗಣಿಸಿದ್ದಾರೆ. ನಗರದಲ್ಲಿ ಮಹಿಳೆಯರು ಯಾವುದೇ ಆತಂಕವಿಲ್ಲದೆ ಸಂಚರಿಸುವ ವಾತಾವರಣ ನಿರ್ಮಿಸುವುದು ಇಲಾಖೆಯ ಉದ್ದೇಶವಾಗಿದೆ. ಕೇವಲ ರಾತ್ರಿ ಸಂಚಾರವಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿಯೂ ಸುರಕ್ಷತೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಸೈಬರ್ ಅಪರಾಧಗಳ (Cyber Crime) ನಿಯಂತ್ರಣ ಮತ್ತು ಮಾದಕ ವಸ್ತುಗಳ ಹಾವಳಿ ತಡೆಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಗೆ ಅಗತ್ಯವಿರುವ ವಿಶೇಷ ಸಂಸ್ಥೆಗಳ ನೆರವನ್ನೂ ಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.

ಐದು ಪೊಲೀಸ್ ವಿಭಾಗಗಳಿಂದ ಜನರಿಗೆ ಅನುಕೂಲ

ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ಪೊಲೀಸ್ ಕಮಿಷನರೇಟ್‌ಗಳಾಗಿ (Police Commissionerates) ವಿಭಜಿಸಿರುವುದರಿಂದ ಸಾರ್ವಜನಿಕರಿಗೆ ಸೇವೆ ಮತ್ತಷ್ಟು ಸುಲಭವಾಗಲಿದೆ ಎಂಬ ನಿರೀಕ್ಷೆಯಿದೆ.

ತಮ್ಮ ವ್ಯಾಪ್ತಿಯ ಪೊಲೀಸ್ ಆಯುಕ್ತರನ್ನು ಜನರು ನೇರವಾಗಿ ಸಂಪರ್ಕಿಸಿ ಸಮಸ್ಯೆಗಳನ್ನು ತಿಳಿಸಬಹುದು. ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಬೇಕಾದ ಅಗತ್ಯ ಇರುವುದಿಲ್ಲ. ಸ್ಥಳೀಯ ಮಟ್ಟದಲ್ಲಿಯೇ ಸಮಸ್ಯೆಗಳಿಗೆ ಸ್ಪಂದಿಸುವ ವ್ಯವಸ್ಥೆ ರೂಪಿಸುವುದು ಈ ಬದಲಾವಣೆಯ ಪ್ರಮುಖ ಉದ್ದೇಶವಾಗಿದೆ.

ಇನ್ನು 2028ರ ವೇಳೆಗೆ ಕರ್ನಾಟಕವನ್ನು ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡುವ ಸರ್ಕಾರದ ಗುರಿಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಆರ್. ಹಿತೇಂದ್ರ ತಿಳಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories