Bengaluru: 24 ಗಂಟೆ ನೀರು ಸ್ಥಗಿತ! ಪೂರ್ವ–ದಕ್ಷಿಣ ಬೆಂಗಳೂರು ಭಾಗಗಳಿಗೆ ತುರ್ತು ಎಚ್ಚರಿಕೆ

ಕಾವೇರಿ 5ನೇ ಹಂತದ EMF ಮೀಟರ್ ಅಳವಡಿಕೆ ಕಾಮಗಾರಿಯಿಂದ ಇಂದು ಬೆಳಿಗ್ಗೆ 6ರಿಂದ ನಾಳೆ ಬೆಳಿಗ್ಗೆ 6ರವರೆಗೆ ಪೂರ್ವ ಮತ್ತು ದಕ್ಷಿಣ ವಲಯಗಳ ಹಲವೆಡೆ ನೀರು ಸರಬರಾಜು ಸ್ಥಗಿತ; ನಿವಾಸಿಗಳಿಗೆ ಮುನ್ನೆಚ್ಚರಿಕೆ ಸೂಚನೆ.

ಬೆಂಗಳೂರು (Bengaluru): ನಗರದಲ್ಲಿ ಮತ್ತೆ ನೀರಿನ ವ್ಯತ್ಯಯದ ಮಾಹಿತಿ ಹೊರಬಿದ್ದಿದೆ. ಕಾವೇರಿ 5ನೇ ಹಂತದ ಯೋಜನೆಯಡಿ EMF ಮೀಟರ್‌ಗಳನ್ನು ಅಳವಡಿಸುವ ತಾಂತ್ರಿಕ ಕಾಮಗಾರಿ ನಡೆಯುತ್ತಿರುವುದರಿಂದ ಇಂದು ಪೂರ್ವ ಹಾಗೂ ದಕ್ಷಿಣ ವಲಯಗಳ ಹಲವು ಪ್ರದೇಶಗಳಲ್ಲಿ 24 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ.

ಬೆಳಿಗ್ಗೆ 6 ಗಂಟೆಯಿಂದ ಪಂಪಿಂಗ್ ಕಾರ್ಯ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ನಾಳೆ ಬೆಳಿಗ್ಗೆ 6 ಗಂಟೆಗೆ ಮರುಪ್ರಾರಂಭವಾಗಲಿದೆ. ಆದರೆ ಪಂಪಿಂಗ್ ಆರಂಭವಾದ ತಕ್ಷಣವೇ ಮನೆಗಳಿಗೆ ನೀರು ತಲುಪುತ್ತದೆ ಎನ್ನುವುದಿಲ್ಲ. ನೀರಿನ ಒತ್ತಡ ಸಾಮಾನ್ಯಗೊಳ್ಳಲು ಹಾಗೂ ಕೊನೆ ಮನೆಗಳವರೆಗೂ ಸರಬರಾಜು ಆಗಲು ಇನ್ನೂ 3 ರಿಂದ 6 ಗಂಟೆಗಳವರೆಗೆ ಹಿಡಿಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವ ಭಾಗಗಳಲ್ಲಿ ವ್ಯತ್ಯಯ?

ಪೂರ್ವ ಬೆಂಗಳೂರಿನ ಮಹದೇವಪುರ ವಲಯ ಹಾಗೂ ಸುತ್ತಮುತ್ತಲಿನ ವೈಟ್‌ಫೀಲ್ಡ್, ಕಾಡುಗೋಡಿ, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ, ಮುನ್ನೇಕೊಳಲ (ಮಾರತಹಳ್ಳಿ ಪ್ರದೇಶ), ನಲ್ಲೂರುಹಳ್ಳಿ, ಸಿದ್ದಾಪುರ, ನಾಗೊಂಡನಹಳ್ಳಿ, ರಾಮಗೊಂದನಹಳ್ಳಿ ಮತ್ತು ಚನ್ನಸಂದ್ರ ಪ್ರದೇಶಗಳಲ್ಲಿ ನೀರು ಸರಬರಾಜು ವ್ಯತ್ಯಯವಾಗಲಿದೆ.

ಅದೇ ರೀತಿ ದಕ್ಷಿಣ ಬೆಂಗಳೂರಿನ ಬನಶಂಕರಿ ವಿವಿಧ ಹಂತಗಳು, ಕುಮಾರಸ್ವಾಮಿ ಲೇಔಟ್, ಪೂರ್ಣಪ್ರಜ್ಞ ಲೇಔಟ್, ಅಂಜನಾಪುರ, ಗೊಟ್ಟಿಗೆರೆ, ಬೇಗೂರು, ಕಲ್ಲಹಳ್ಳಿ, ಕುಡ್ಲು ಹಾಗೂ ಕೊಡಿಚಿಕ್ಕನಹಳ್ಳಿ ಭಾಗಗಳಲ್ಲೂ ನೀರು ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ನೀರಿನ ಸಮರ್ಪಕ ನಿರ್ವಹಣೆ ಹಾಗೂ ಭವಿಷ್ಯದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು EMF ಮೀಟರ್‌ಗಳ ಅಳವಡಿಕೆ ಮಾಡಲಾಗುತ್ತಿದೆ. ಈ ತಂತ್ರಜ್ಞಾನದಿಂದ ನೀರಿನ ಪ್ರಮಾಣ ಮತ್ತು ಒತ್ತಡವನ್ನು ನಿಖರವಾಗಿ ಅಳೆಯಲು ಸಾಧ್ಯವಾಗಲಿದೆ. ಮುಂಬರುವ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸಲು ಇದು ಸಹಾಯಕವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ನಿವಾಸಿಗಳು ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಅನಗತ್ಯ ಬಳಕೆಯನ್ನು ತಪ್ಪಿಸಿ ಸಹಕರಿಸುವಂತೆ ಜಲಮಂಡಳಿ ಮನವಿ ಮಾಡಿದೆ. ಉಂಟಾಗುವ ತಾತ್ಕಾಲಿಕ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಲಾಗಿದೆ.

Related Stories