ಬೆಂಗಳೂರು ಮನೆ ಕಳ್ಳತನ ಪ್ರಕರಣ: 50 ಲಕ್ಷ ಮೌಲ್ಯದ ಚಿನ್ನಾಭರಣ ಸಮೇತ ಆರೋಪಿ ಸೆರೆ
ಬೆಂಗಳೂರು ನಗರದ ಮನೆಗಳನ್ನು ಟಾರ್ಗೆಟ್ ಮಾಡಿ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ನಗರದ ಮನೆಗಳಿಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ, ಭಾರೀ ಪ್ರಮಾಣದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಹೇಶ್ ಗೌಡ (40) ಎಂದು ಗುರುತಿಸಲಾಗಿದೆ.
ಆರೋಪಿಯಿಂದ ಸುಮಾರು 318 ಗ್ರಾಂ ಚಿನ್ನ ಹಾಗೂ ವಜ್ರಾಭರಣಗಳು, ಜೊತೆಗೆ 2 ಕೆಜಿ 435 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು 50 ಲಕ್ಷ ರೂಪಾಯಿಗಳಷ್ಟಿದೆ ಎಂದು ತಿಳಿದುಬಂದಿದೆ.
ಚುಂಚಘಟ್ಟ ಮುಖ್ಯರಸ್ತೆಯ ಮೈಸೂರು ಬ್ಯಾಂಕ್ ಕಾಲೊನಿಯಲ್ಲಿ ವಾಸವಾಗಿದ್ದ ರೇಖಾ ಎಂಬವರು ಕುಟುಂಬ ಸಮೇತ ಊರಿಗೆ ತೆರಳಿದ್ದರು. ಮನೆ ಕೀಯನ್ನು ಸಂಬಂಧಿಕರ ಬಳಿ ಇಟ್ಟು ಹೋಗಿದ್ದರು. ಕೆಲವು ದಿನಗಳ ಬಳಿಕ ಮನೆಗೆ ವಾಪಸ್ ಬಂದಾಗ ಬೀರುವಿನಲ್ಲಿದ್ದ ಚಿನ್ನಾಭರಣಗಳು ಮತ್ತು ವಜ್ರಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಮೊದಲು ಸಂಬಂಧಿಕರನ್ನೂ ಸೇರಿ ಹಲವರನ್ನು ವಿಚಾರಣೆ ನಡೆಸಿದ್ದರು. ಆರಂಭದಲ್ಲಿ ಯಾವುದೇ ಸುಳಿವು ಸಿಗದಿದ್ದರೂ, ಬಳಿಕ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಮದ್ದೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರ ತನಿಖೆಯಲ್ಲಿ, ಆರೋಪಿ ಮನೆಗಳ ಬೀಗ ಮುರಿದು ಕಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ ಎಂಬುದು ಗೊತ್ತಾಗಿದೆ. ಕಳವು ಮಾಡಿದ ಚಿನ್ನಾಭರಣಗಳನ್ನು ಮದ್ದೂರಿನ ಕೆಲವು ಆಭರಣ ಅಂಗಡಿಗಳಲ್ಲಿ ಅಡಮಾನ ಇಟ್ಟಿದ್ದಲ್ಲದೆ, ಕೆಲವು ವಸ್ತುಗಳನ್ನು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ.
ಹರಿಹರ ನಗರದಲ್ಲಿ ವಾಸವಿದ್ದ ಆರೋಪಿ, ಬೆಂಗಳೂರಿನಲ್ಲಿ ಕಳ್ಳತನ ಎಸಗಿ ಬಳಿಕ ರೈಲಿನ ಮೂಲಕ ಮದ್ದೂರಿಗೆ ಪರಾರಿಯಾಗುತ್ತಿದ್ದ. ಕೆಲ ದಿನಗಳ ಬಳಿಕ ಮತ್ತೆ ನಗರಕ್ಕೆ ಬಂದು ಇದೇ ರೀತಿ ಕೃತ್ಯ ಮುಂದುವರಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.



