Bengaluru: ಕ್ರಿಕೆಟ್ ಗಲಾಟೆ ಸಾವಿನಲ್ಲಿ ಅಂತ್ಯ! ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ಘಟನೆ

ಕ್ರಿಕೆಟ್ ವಿಚಾರಕ್ಕೆ ಆರಂಭವಾದ ಗಲಾಟೆ ಆನೇಕಲ್ ಕಮ್ಮಸಂದ್ರದಲ್ಲಿ ಭೀಕರ ದುರಂತಕ್ಕೆ ತಿರುಗಿ ಯುವಕನ ಸಾವು ಸಂಭವಿಸಿದ್ದು ಅಪಘಾತವೋ ಕೊಲೆಯೋ ಎಂಬ ಅನುಮಾನ ಮೂಡಿಸಿದೆ

  • ಕ್ರಿಕೆಟ್ ಗಲಾಟೆ ಬಳಿಕ ಆನೇಕಲ್‌ನಲ್ಲಿ ಯುವಕ ಸಾವು
  • ಕಾರು ಅಪಘಾತವೇ ಅಥವಾ ಕೊಲೆಯೇ ಎಂಬ ಅನುಮಾನ
  • ಕುಟುಂಬಸ್ಥರ ದೂರಿನ ಮೇರೆಗೆ ಹೆಬ್ಬಗೋಡಿ ಪೊಲೀಸ್ ತನಿಖೆ

ಬೆಂಗಳೂರು (Bengaluru): ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದ ಘಟನೆ, ಸಣ್ಣ ಗಲಾಟೆ ಹೇಗೆ ಪ್ರಾಣಹಾನಿಗೆ ಕಾರಣವಾಗಬಹುದು ಎಂಬುದಕ್ಕೆ ಆತಂಕಕಾರಿ ಉದಾಹರಣೆಯಾಗಿದೆ. ಕ್ರಿಕೆಟ್ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ, ಕೊನೆಗೆ ಯುವಕನ ಸಾವಿನಲ್ಲಿ ಅಂತ್ಯಗೊಂಡಿದೆ.

ಹೆಬ್ಬಗೋಡಿ ನಿವಾಸಿ ಪ್ರಶಾಂತ್ (28) ಮೃತ ಯುವಕ. ಮದ್ಯದ ನಶೆಯಲ್ಲಿ ಪ್ರಶಾಂತ್ ಮತ್ತು ರೋಷನ್ ಹೆಗ್ಡೆ ನಡುವೆ ಕಿರಿಕ್ ನಡೆದಿದ್ದು, ಗಲಾಟೆ ತೀವ್ರಗೊಂಡಿದೆ ಎನ್ನಲಾಗಿದೆ. ಈ ವೇಳೆ ರೋಷನ್ ಕಾರಿನಲ್ಲಿ ಅಲ್ಲಿಂದ ತೆರಳಲು ಯತ್ನಿಸಿದರೂ, ಪ್ರಶಾಂತ್ ಕಾರಿನ ಎಡಭಾಗದ ಕಿಟಕಿಯನ್ನು ಹಿಡಿದು ನೇತಾಡುತ್ತಲೇ ಕಾರು ನಿಲ್ಲಿಸುವಂತೆ ಒತ್ತಾಯಿಸಿದ್ದಾನೆ.

ಇದನ್ನೂ ಓದಿ: ತುಮಕೂರಿನಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಬೆಂಗಳೂರು ಮೂಲದ ಮೂವರು ಸಾವು

ಅಪಘಾತದ ಕ್ಷಣಗಳು ಸಿಸಿ ಕ್ಯಾಮರಾದಲ್ಲಿ ದಾಖಲು

ಆರೋಪದ ಪ್ರಕಾರ, ರೋಷನ್ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ಮೊದಲು ಕಾಂಪೌಂಡ್ ಗೋಡೆಗೆ, ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಈ ಭೀಕರ ಢಿಕ್ಕಿಯಲ್ಲಿ ಪ್ರಶಾಂತ್ ತಲೆಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರೋಷನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆಯ ಕೊನೆಯ ಕ್ಷಣಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪ್ರಶಾಂತ್ ಕಾರು ನಿಲ್ಲಿಸುವಂತೆ ಹೇಳುತ್ತಿದ್ದರೂ ವೇಗ ಕಡಿಮೆ ಮಾಡದೆ ಚಾಲನೆ ಮಾಡಿರುವುದು ದೃಶ್ಯಗಳಲ್ಲಿ ಕಾಣಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಇದನ್ನೂ ಓದಿ: ರಿವರ್ಸ್ ವೇಳೆ ರೈಲಿಗೆ ಡಿಕ್ಕಿ ಹೊಡೆದ ಬೆಂಗಳೂರು ಬಿಎಂಟಿಸಿ ಬಸ್

ಕುಟುಂಬಸ್ಥರಿಂದ ಕೊಲೆ ಆರೋಪ

ಮೃತನ ತಾಯಿ ಹಾಗೂ ಕುಟುಂಬಸ್ಥರು ಇದು ಅಪಘಾತವಲ್ಲ, ಉದ್ದೇಶಪೂರ್ವಕ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕ್ರಿಕೆಟ್ ಟೂರ್ನಮೆಂಟ್ ವೇಳೆ ತಂಡ ಸೋತ ವಿಚಾರವಾಗಿ ಮೊದಲೇ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಘಟನೆ ನಡೆದ ದಿನವೂ ಮೈದಾನದಲ್ಲೇ ಗಲಾಟೆ ನಡೆದಿದ್ದು, ನಂತರ ಕಾರಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕುಟುಂಬದ ದೂರಿನ ಮೇರೆಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories