Bengaluru: ಬೆಂಗಳೂರು-ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಚಾಲಕನ ಹುಚ್ಚಾಟ; ಎಫ್‌ಐಆರ್ ದಾಖಲು

ಬೆಂಗಳೂರು–ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಅತಿವೇಗವಾಗಿ ಚಲಾಯಿಸಿದ ದೃಶ್ಯ ವೈರಲ್ ಆಗಿದ್ದು ಸಾರ್ವಜನಿಕರ ಜೀವಕ್ಕೆ ಅಪಾಯ ತಂದ ಆರೋಪದಲ್ಲಿ ಕೆಂಗೇರಿ ಸಂಚಾರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ

  • ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಅತಿವೇಗ ಚಾಲನೆ
  • ವೈರಲ್ ವಿಡಿಯೋ ಆಧರಿಸಿ ಕೆಂಗೇರಿ ಸಂಚಾರ ಪೊಲೀಸರ ಎಫ್‌ಐಆರ್
  • ಬೆಂಗಳೂರು ಸಂಚಾರ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಎಚ್ಚರಿಕೆ

ಬೆಂಗಳೂರು–ಮೈಸೂರು ಮುಖ್ಯರಸ್ತೆಯಲ್ಲಿ (Bengaluru-Mysuru Road) ದುಬಾರಿ ಲ್ಯಾಂಬೋರ್ಗಿನಿ ಕಾರು (Lamborghini Car) ಅಜಾಗರೂಕವಾಗಿ ಚಲಾಯಿಸಿದ ಘಟನೆ ಇದೀಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ, ಲೇನ್ ಬದಲಾವಣೆ ಮತ್ತು ಅಪಾಯಕಾರಿ ಸ್ಟಂಟ್ಸ್‌ನೊಂದಿಗೆ ಕಾರು ಚಲಾಯಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದೆ.

ಎಕ್ಸ್‌ನಲ್ಲಿ ಕಂಡ ದೃಶ್ಯ, ಪೊಲೀಸರ ಗಮನಕ್ಕೆ

ಜನವರಿ 20ರಂದು ಕರ್ತವ್ಯದಲ್ಲಿದ್ದ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ರಾಮಸ್ವಾಮಿ ಆರ್, ಸಾಮಾಜಿಕ ಜಾಲತಾಣ ‘ಎಕ್ಸ್’ ಪರಿಶೀಲನೆ ವೇಳೆ ಈ ವಿಡಿಯೋ ಗಮನಿಸಿದ್ದಾರೆ. ಜನವರಿ 19ರಂದು ಅಪ್‌ಲೋಡ್ ಆಗಿದ್ದ ಈ ದೃಶ್ಯದಲ್ಲಿ, ರಾಜರಾಜೇಶ್ವರಿ ನಗರ ಆರ್ಚ್ ಬಳಿ ಹಸಿರು ಬಣ್ಣದ ಲ್ಯಾಂಬೋರ್ಗಿನಿ ಹುರಾಕಾನ್ ಕಾರು ಮೈಸೂರು ರಸ್ತೆಯತ್ತ ಅಪಾಯಕಾರಿ ರೀತಿಯಲ್ಲಿ ಚಲಿಸುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚುವರಿ ಭದ್ರತಾ ಕ್ರಮ! ವಿಮಾನ ಪ್ರಯಾಣಿಕರಿಗೆ ಬಿಗ್ ಅಪ್‌ಡೇಟ್

ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು

ವಿಡಿಯೋದಲ್ಲಿ ಕಾರು ಅತಿವೇಗವಾಗಿ ಲೇನ್ ಬದಲಿಸುತ್ತಾ, ದೋಷಪೂರಿತ ಸೈಲೆನ್ಸರ್ ಬಳಸಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಚಲಾಯಿಸಿರುವುದು ದೃಢಪಟ್ಟಿದೆ. ಈ ಹಿನ್ನೆಲೆ, ಪಿಎಸ್‌ಐ ಸ್ವಯಂಪ್ರೇರಿತವಾಗಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಅಜಾಗರೂಕ ಮತ್ತು ಅಪಾಯಕಾರಿ ಚಾಲನೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಚಾಲಕನ ಗುರುತು ಪತ್ತೆಗೆ ಕ್ರಮ

ಲ್ಯಾಂಬೋರ್ಗಿನಿ ಕಾರಿನ ನೋಂದಣಿ ವಿವರಗಳು ಹಾಗೂ ಚಾಲಕನ ಗುರುತು ಪತ್ತೆಹಚ್ಚುವ ಕಾರ್ಯವನ್ನು ಸಂಚಾರ ಪೊಲೀಸರು ಆರಂಭಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವವರ ವಿರುದ್ಧ ಯಾವುದೇ ರೀತಿ ಸಡಿಲಿಕೆ ಇಲ್ಲ ಎಂದು ಡಿಸಿಪಿ ಅನೂಪ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories