ಬೆಂಗಳೂರು ಕೃಷಿ ವಿವಿ ಜಿಕೆವಿಕೆ ಆವರಣದಲ್ಲಿ ಜೇನು ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ
ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಜೇನುತುಪ್ಪ ಗುಣಮಟ್ಟ ಪರಿಶೀಲನೆಗಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಆವರಣದಲ್ಲಿ ಎನ್‌ಎಂಆರ್ ತಂತ್ರಜ್ಞಾನ ಹೊಂದಿದ ಪ್ರಯೋಗಾಲಯ ಸ್ಥಾಪನೆಗೆ ಮುಂದಾಗಿದೆ. ರಫ್ತುಗಾರರಿಗೆ ಇದರಿಂದ ದೊಡ್ಡ ನೆರವು ಸಿಗಲಿದೆ.

ಬೆಂಗಳೂರು (Bengaluru): ದೇಶೀಯ ಜೇನುತುಪ್ಪಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನ್ಯೂಕ್ಲಿಯರ್ ಮ್ಯಾಗ್ನೆಟಿಕ್ ರೆಸೋನೆನ್ಸ್ (ಎನ್‌ಎಂಆರ್) ತಂತ್ರಜ್ಞಾನ ಹೊಂದಿದ ಜೇನುತುಪ್ಪ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ.
ಮುಕ್ತ ಮಾರುಕಟ್ಟೆಯಲ್ಲಿ ನಕಲಿ ಲೇಬಲ್ ಹಾಗೂ ಕಲಬೆರಕೆ ಜೇನುತುಪ್ಪ ಮಾರಾಟ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಸಕ್ಕರೆ, ಬೆಲ್ಲದ ಅಂಶ, ರೈಸ್ ಸಿರಪ್ ಸೇರಿದಂತೆ ಮಿಶ್ರಿತ ಪದಾರ್ಥಗಳನ್ನು ಸಾಮಾನ್ಯ ಪರೀಕ್ಷೆಯಿಂದ ಪತ್ತೆಹಚ್ಚುವುದು ಕಷ್ಟ. ಆದರೆ ಎನ್‌ಎಂಆರ್ ತಂತ್ರಜ್ಞಾನ ದತ್ತಾಂಶ ಆಧರಿಸಿ ನಿಖರ ವರದಿ ನೀಡುವ ಮೂಲಕ ಕಲಬೆರಕೆ ಉತ್ಪನ್ನಗಳನ್ನು ಗುರುತಿಸಲು ನೆರವಾಗಲಿದೆ.
ರಫ್ತುಗಾರರಿಗೆ ನೆರವು
ಜಾಗತಿಕ ಮಾರುಕಟ್ಟೆಗೆ ಜೇನುತುಪ್ಪ ರಫ್ತು ಮಾಡುವವರಿಗೆ ಎನ್‌ಎಂಆರ್ ಆಧಾರಿತ ಪ್ರಮಾಣಪತ್ರ ಕಡ್ಡಾಯವಾಗುತ್ತಿದೆ. ಐರೋಪ್ಯ ಒಕ್ಕೂಟ, ಅಮೆರಿಕ, ಜಪಾನ್, ಮಧ್ಯಪೂರ್ವ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಗುಣಮಟ್ಟದ ಜೇನುತುಪ್ಪ ರಫ್ತು ಮಾಡಲು ಈ ಮಾನ್ಯತೆ ಅಗತ್ಯವಾಗಿದೆ.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ (ವಿಟಿಪಿಸಿ) ಸಹಯೋಗದಲ್ಲಿ ಸುಮಾರು ₹10.3 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪನೆಗೊಳ್ಳಲಿದೆ. ಎನ್‌ಎಂಆರ್ ಯಂತ್ರದ ಅಂದಾಜು ಬೆಲೆ ₹6 ರಿಂದ ₹7 ಕೋಟಿ ನಡುವೆ ಇದ್ದು, ಇದರ ಖರೀದಿಗೆ ರಾಜ್ಯ ಸರ್ಕಾರ ಅನುದಾನ ನೀಡಿದೆ. ಜೊತೆಗೆ ಕೌಶಲಾಭಿವೃದ್ಧಿ ತರಬೇತಿಗೆ ಎಚ್‌ಎಎಲ್ ₹4.8 ಕೋಟಿ ಸಹಾಯ ಮಾಡಿದೆ.
ಸ್ಥಳೀಯರಿಗೆ ಲಾಭ
ಜೇನುತುಪ್ಪದ ಸಸ್ಯ ಮೂಲ ಹಾಗೂ ಭೌಗೋಳಿಕ ಮಾಹಿತಿ ಪತ್ತೆಹಚ್ಚುವ ಸಾಮರ್ಥ್ಯವೂ ಈ ತಂತ್ರಜ್ಞಾನಕ್ಕೆ ಇದೆ. ದೇಶದಲ್ಲಿ ಇಂತಹ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳ ಸಂಖ್ಯೆ ಕಡಿಮೆ ಇರುವುದರಿಂದ, ಜಿಕೆವಿಕೆಯ ಈ ಕೇಂದ್ರ ಸ್ಥಳೀಯ ಜೇನು ಕೃಷಿಕರು ಹಾಗೂ ಸಂಸ್ಕರಣೆದಾರರಿಗೆ ದೊಡ್ಡ ಬೆಂಬಲವಾಗಲಿದೆ.
ರಫ್ತುಗಾರರು ನಿಗದಿತ ಶುಲ್ಕ ಪಾವತಿಸಿ ಜಾಗತಿಕ ಮಾನದಂಡಗಳ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ. ಇದರಿಂದ ಭಾರತೀಯ ಜೇನುತುಪ್ಪದ ವಿಶ್ವಾಸಾರ್ಹತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.



