ಬೆಂಗಳೂರು ಪಿಜಿಯಲ್ಲಿ ಸಿಲಿಂಡರ್ ಸ್ಫೋಟ; ಯುವಕ ಸಾವು, ಮೂವರಿಗೆ ಗಂಭೀರ ಗಾಯ
ಬೆಂಗಳೂರು ಕುಂದಲಹಳ್ಳಿ ಬ್ರೂಕ್ಫೀಲ್ಡ್ ರಸ್ತೆಯ ಪಿಜಿಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿ ಓರ್ವ ಯುವಕ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರವನ್ನು ಬೆಚ್ಚಿಬೀಳಿಸಿದೆ.
- ಬೆಂಗಳೂರು ಪಿಜಿಯಲ್ಲಿ ಸಿಲಿಂಡರ್ ಸ್ಫೋಟದಿಂದ ಸಾವು
- ಗ್ಯಾಸ್ ಲೀಕ್ನಿಂದ ಅವಘಡ, ಮೂವರ ಸ್ಥಿತಿ ಗಂಭೀರ
- ಹೆಚ್ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಬೆಂಗಳೂರು (Bengaluru): ಬೆಂಗಳೂರು ನಗರದ ಪಿಜಿ ವಸತಿ ಕೇಂದ್ರಗಳಲ್ಲಿ ಸುರಕ್ಷತೆ ಬಗ್ಗೆ ಆತಂಕ ಹುಟ್ಟಿಸುವ ಮತ್ತೊಂದು ದುರ್ಘಟನೆ ಬೆಳಕಿಗೆ ಬಂದಿದೆ. ಕುಂದಲಹಳ್ಳಿ ಬ್ರೂಕ್ಫೀಲ್ಡ್ ರಸ್ತೆಯಲ್ಲಿರುವ ಸೆವೆನ್ ಹಿಲ್ಸ್ ಕೋ-ಲಿವಿಂಗ್ ಪಿಜಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ (Gas Cylinder Blast) ಸಂಭವಿಸಿ ಓರ್ವ ಯುವಕ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (HAL Police Station) ನಡೆದಿದ್ದು, ಪಿಜಿಯ ಕೆಳ ಮಹಡಿಯಲ್ಲಿ ಇರುವ ಕಿಚನ್ ಸ್ಟೋರ್ನಲ್ಲಿ ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇತ್ತೀಚಿಗಷ್ಟೇ ಪಿಜಿಗೆ ಸೇರಿದ್ದ ಅರವಿಂದ್ ಮೃತ
ಸಿಲಿಂಡರ್ ಸ್ಫೋಟದಲ್ಲಿ ಬಳ್ಳಾರಿ ಮೂಲದ ಅರವಿಂದ್ ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೆಲವೇ ದಿನಗಳ ಹಿಂದೆ ಉದ್ಯೋಗ ನಿಮಿತ್ತ ಬೆಂಗಳೂರಿಗೆ ಬಂದು ಈ ಪಿಜಿಗೆ ಸೇರಿದ್ದ ಅರವಿಂದ್ಗೆ ವಿಧಿ ಬರೆದಿದ್ದಂತೆ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಬೆಂಗಳೂರು ಬ್ಯಾಂಕ್ ಮ್ಯಾನೇಜರ್ ವಂಚನೆ! ಗ್ರಾಹಕರ ಹೆಸರಿನಲ್ಲಿ ಸಾಲ ಪಡೆದು ಪರಾರಿ
ಮೂವರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಈ ಘಟನೆಯಲ್ಲಿ ಕರ್ನೂಲ್ ಮೂಲದ ವೆಂಕಟೇಶ್, ಉತ್ತರಾಖಂಡದ ವಿಶಾಲ್ ಹಾಗೂ ಸಿಸಿ ಗೋಯಲ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪಿಜಿಯಲ್ಲಿ 40ಕ್ಕೂ ಹೆಚ್ಚು ಜನ ವಾಸ
ಸ್ಥಳೀಯರ ಪ್ರಕಾರ, ಬೆಳಗ್ಗೆ ಸುಮಾರು 8 ಗಂಟೆ ಸುಮಾರಿಗೆ ಸ್ಫೋಟದ ಮಾಹಿತಿ ತಿಳಿದುಬಂದಿದೆ. ಸೆವೆನ್ ಹಿಲ್ಸ್ ಪಿಜಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದು, ಮೇಲ್ಮಹಡಿಗಳಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ. ಉಳಿದ ನಿವಾಸಿಗಳಿಗೆ ತಾತ್ಕಾಲಿಕವಾಗಿ ಬೇರೆ ಸ್ಥಳದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಈ ಸಂಬಂಧ ಹೆಚ್ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಿಜಿಗಳಲ್ಲಿನ ಗ್ಯಾಸ್ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವವಾಗಿವೆ.



