ಬೆಂಗಳೂರು ವೈಟ್‌ಫೀಲ್ಡ್‌ನಲ್ಲಿ ದುರಂತ: ಇಂಗು ಗುಂಡಿಗೆ ಇಳಿದು ಮೂವರು ಸಾವು

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಇಂಗು ಗುಂಡಿ ಸ್ವಚ್ಛಗೊಳಿಸುವ ವೇಳೆ ಮೂವರು ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದಾರೆ.

ಬೆಂಗಳೂರು (Bengaluru): ನಗರದ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲ ವೃತ್ತದ ಸಮೀಪ ಮಳೆನೀರಿನ ಇಂಗು ಗುಂಡಿ (Rainwater Soak Pit) ಸ್ವಚ್ಛಗೊಳಿಸುವ ವೇಳೆ ಭೀಕರ ದುರಂತ ಸಂಭವಿಸಿದೆ. ರಾಸಾಯನಿಕ ದ್ರವ ಬಳಸಿ ಗುಂಡಿಯನ್ನು ಕ್ಲೀನ್ ಮಾಡಲು ಮುಂದಾದ ಮೂವರು ಉಸಿರಾಟದ ತೊಂದರೆಯಿಂದ ಮೂರ್ಛೆ ಹೋಗಿ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಮೃತರನ್ನು ಮುನಿಶಾಮಪ್ಪ (67), ರುದ್ರಕುಮಾರ್ (40) ಮತ್ತು ವಿಶ್ವನಾಥ್ ಆಚಾರಿ (24) ಎಂದು ಗುರುತಿಸಲಾಗಿದೆ. ಸುಮಾರು 12 ವರ್ಷಗಳ ಹಿಂದೆ ನಿರ್ಮಿಸಿದ್ದ ಇಂಗು ಗುಂಡಿ ಬಳಕೆಯಾಗದೇ ಇದ್ದ ಕಾರಣ ಒಳಗೆ ಕಸದ ಅವಶೇಷಗಳು ಕೊಳೆತು ದುರ್ವಾಸನೆ ಹರಡುತ್ತಿತ್ತು. ಇದನ್ನು ಸ್ವಚ್ಛಗೊಳಿಸಲು ಕೆಮಿಕಲ್ ಹಾಕಲಾಗಿತ್ತು.

ಮೊದಲು ಗುಂಡಿಗೆ ಇಳಿದ ಮನೆ ಮಾಲೀಕ ಮುನಿಶಾಮಪ್ಪ ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದರು. ಅವರನ್ನು ರಕ್ಷಿಸಲು ಇಳಿದ ಪ್ಲಂಬರ್ ರುದ್ರಕುಮಾರ್ ಕೂಡ ಅದೇ ಸ್ಥಿತಿಗೆ ತಲುಪಿದರು. ಬಳಿಕ ಪರಿಸ್ಥಿತಿ ಅರಿಯದೆ ಸಹಾಯಕ್ಕೆ ಇಳಿದ ಡೆಲಿವರಿ ಬಾಯ್ ವಿಶ್ವನಾಥ್ ಆಚಾರಿ ಕೂಡ ಪ್ರಜ್ಞೆ ಕಳೆದುಕೊಂಡರು. ಸ್ಥಳೀಯರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಮೂವರ ಜೀವ ಉಳಿಯಲಿಲ್ಲ. ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಘಟನೆ ಬಳಿಕ ಸುರಕ್ಷತಾ ಕ್ರಮಗಳಿಲ್ಲದೆ ಇಂಗು ಗುಂಡಿ ಅಥವಾ ಸೆಪ್ಟಿಕ್ ಟ್ಯಾಂಕ್‌ಗಳಿಗೆ ಇಳಿಯುವುದು ಎಷ್ಟು ಅಪಾಯಕರ ಎಂಬ ಪ್ರಶ್ನೆ ಮತ್ತೊಮ್ಮೆ ಮುಂದಕ್ಕೆ ಬಂದಿದೆ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories