ಬೆಂಗಳೂರು ಮಂದಿಗೆ ವೈರಲ್ ಜ್ವರದ ಆತಂಕ! ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
ಹವಾಮಾನ ವೈಪರೀತ್ಯದ ನಡುವೆ ಬೆಂಗಳೂರಿನಲ್ಲಿ ಜ್ವರ, ಶೀತ, ಕೆಮ್ಮು, ವಾಂತಿ, ಬೇಧಿ ಸೇರಿದಂತೆ ಹಲವು ಸೋಂಕುಗಳ ಪ್ರಕರಣಗಳು ಹೆಚ್ಚಾಗಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.

ಬೆಂಗಳೂರು (Bengaluru), ಅಕ್ಟೋಬರ್ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನದಲ್ಲಾಗುತ್ತಿರುವ ಏರುಪೇರಿನ ನಡುವೆ ವಿವಿಧ ಆರೋಗ್ಯ ಸಮಸ್ಯೆಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಜ್ವರ, ನೆಗಡಿ, ಕೆಮ್ಮು ಮಾತ್ರವಲ್ಲದೆ ವಾಂತಿ ಮತ್ತು ಬೇಧಿಯಿಂದ ಬಳಲುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.
ನಗರದಲ್ಲಿ ಕೆಲ ದಿನ ಮಳೆಯಾದರೆ, ಮತ್ತೊಂದು ದಿನ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಈ ರೀತಿಯ ಬದಲಾದ ವಾತಾವರಣದಿಂದ ಮಕ್ಕಳು, ವಯಸ್ಕರು ಹಾಗೂ ಹಿರಿಯರಲ್ಲಿ ಸೋಂಕುಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ಒಂದು ವಾರದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದಾರೆ.
ಕೆ.ಸಿ. ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿ.ವಿ. ರಾಮನ್ ನಗರ ಆಸ್ಪತ್ರೆ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ, ಶೀತ, ಕೆಮ್ಮು ಮತ್ತು ಸುಸ್ತಿನಂತಹ ಲಕ್ಷಣಗಳೊಂದಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಇದನ್ನೂ ಓದಿ: ಡಿಸೆಂಬರ್ 4ರಿಂದ ‘ಬೆಂಗಳೂರು ಜಾತ್ರೆ’! 10 ದಿನ ಬೆಂಗಳೂರಲ್ಲಿ ಊರಹಬ್ಬದ ಸಂಭ್ರಮ
ಮಕ್ಕಳಲ್ಲಿಯೂ ಇಂತಹ ಲಕ್ಷಣಗಳು ಕಂಡುಬರುತ್ತಿರುವುದರಿಂದ ಪೋಷಕರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ಕಳೆದ ಒಂದು ವಾರದ ಅಂಕಿ-ಅಂಶಗಳನ್ನು ಗಮನಿಸಿದರೆ, ವಾಂತಿ ಮತ್ತು ಬೇಧಿಗೆ ಸಂಬಂಧಿಸಿದಂತೆ 3,297 ಪ್ರಕರಣಗಳು ದಾಖಲಾಗಿವೆ.
ತೀವ್ರ ಉಸಿರಾಟದ ಸೋಂಕು (SARI) 268 ಪ್ರಕರಣಗಳು, ಇನ್ಫ್ಲುಯೆನ್ಜಾ (Influenza) 274 ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಇಲಿ ಜ್ವರ (Leptospirosis) 94, ಡೆಂಗ್ಯೂ (Dengue) 242 ಹಾಗೂ ಮಲೇರಿಯಾ (Malaria) 128 ಪ್ರಕರಣಗಳು ದಾಖಲಾಗಿವೆ.
ವೈರಲ್ ಜ್ವರದ ಜೊತೆಗೆ ವಾಂತಿ ಮತ್ತು ಬೇಧಿ ಪ್ರಕರಣಗಳ ಹೆಚ್ಚಳವೂ ಆರೋಗ್ಯ ಇಲಾಖೆಯ ಗಮನ ಸೆಳೆದಿದೆ. ಮಳೆ ಮತ್ತು ಬಿಸಿಲಿನ ನಡುವೆ ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಗಳು ಸೋಂಕು ಹರಡುವ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದು, ವೈಯಕ್ತಿಕ ಸ್ವಚ್ಛತೆ ಹಾಗೂ ಸುರಕ್ಷಿತ ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಯುವನಿಧಿ ಯೋಜನೆ: ಉಚಿತ ತರಬೇತಿ, ನಿರುದ್ಯೋಗಿ ಯುವಕ-ಯುವತಿಯರಿಗೆ ಬಂಪರ್ ಅವಕಾಶ
ಮಳೆ ಬಿದ್ದ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಬಳಸುವಂತೆ ಸೂಚಿಸಲಾಗಿದೆ. ಜ್ವರ, ನಿರಂತರ ಕೆಮ್ಮು, ವಾಂತಿ, ಬೇಧಿ ಅಥವಾ ತೀವ್ರ ಸುಸ್ತಿನಂತಹ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ತೆಗೆದುಕೊಳ್ಳದೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.
ಆರೋಗ್ಯ ಇಲಾಖೆಯೂ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದೆ. ಹವಾಮಾನ ಬದಲಾವಣೆಯ ನಡುವೆಯೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೆ, ಆರಂಭಿಕ ಲಕ್ಷಣಗಳಲ್ಲೇ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯವಾಗಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



