ಯುವನಿಧಿ ಯೋಜನೆ: ಉಚಿತ ತರಬೇತಿ, ನಿರುದ್ಯೋಗಿ ಯುವಕ-ಯುವತಿಯರಿಗೆ ಬಂಪರ್ ಅವಕಾಶ
ಉದ್ಯೋಗ ಹುಡುಕುತ್ತಿರುವ ಯುವಕ-ಯುವತಿಯರಿಗೆ ಯುವನಿಧಿ ಪ್ಲಸ್ ಯೋಜನೆಯಡಿ ಉಚಿತ ಕೌಶಲ ತರಬೇತಿ ನೀಡಲಾಗುತ್ತಿದ್ದು, ಅರ್ಹರು ಸಮೀಪದ ತರಬೇತಿ ಕೇಂದ್ರದಲ್ಲಿ ನೋಂದಾಯಿಸಿಕೊಂಡು ಅವಕಾಶ ಬಳಸಿಕೊಳ್ಳಬಹುದು.

ಮಂಗಳೂರು: ಕರ್ನಾಟಕ ಸರ್ಕಾರದ ಯುವನಿಧಿ (Yuvanidhi) ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಯುವಕ-ಯುವತಿಯರಿಗೆ ಕೌಶಲ್ಯ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯುವನಿಧಿ ಪ್ಲಸ್ (Yuvanidhi Plus) ಯೋಜನೆಯಡಿ ಉಚಿತ ತರಬೇತಿ ನೀಡಲಾಗುತ್ತಿದ್ದು, ತರಬೇತಿಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ತಾಂತ್ರಿಕ ಮತ್ತು ವೃತ್ತಿಪರ ಕೌಶಲಗಳನ್ನು ಕಲಿಯಲು ಈ ತರಬೇತಿ ಸಹಕಾರಿಯಾಗಲಿದೆ. ತರಬೇತಿ ಪೂರ್ಣಗೊಳಿಸಿದ ಬಳಿಕ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: ಯುವತಿ ಸ್ಥಳದಲ್ಲೇ ಸಾವು
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ತರಬೇತಿ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಐಟಿಐ ಕದ್ರಿ, ಮಹಿಳಾ ಐಟಿಐ ಮಂಗಳೂರು, ಕೆಜಿಟಿಟಿಐ ಕದ್ರಿ (KGTTI), ಜಿಟಿಟಿಸಿ ಬೈಕಂಪಾಡಿ (GTTC), ಸರ್ಕಾರಿ ಐಟಿಐ ಬೆಳ್ತಂಗಡಿ, ಸರ್ಕಾರಿ ಐಟಿಐ ಪುತ್ತೂರು ಹಾಗೂ ಸರ್ಕಾರಿ ಐಟಿಐ ವಿಟ್ಲದಲ್ಲಿ ತರಬೇತಿ ನಡೆಯಲಿದೆ.
ಪ್ರಸ್ತುತ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಫಲಾನುಭವಿಗಳು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಆಸಕ್ತರು ತಮಗೆ ಅನುಕೂಲವಾಗುವ ದಿನಾಂಕ ಮತ್ತು ಸಮಯವನ್ನು ಗಮನಿಸಿಕೊಂಡು ಹತ್ತಿರದ ತರಬೇತಿ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆ: 34.76 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತ! ಇಲ್ಲಿದೆ ಕಾರಣ
ಕೇವಲ ನಿರುದ್ಯೋಗ ಭತ್ಯೆ ಪಡೆಯುವುದಕ್ಕೆ ಸೀಮಿತವಾಗದೆ, ಉದ್ಯೋಗ ಮಾರುಕಟ್ಟೆಗೆ ಅಗತ್ಯವಿರುವ ಹೊಸ ಕೌಶಲಗಳನ್ನು ಕಲಿಯಲು ಈ ಅವಕಾಶ ಬಳಸಿಕೊಳ್ಳಬಹುದು. ಅರ್ಹ ಯುವನಿಧಿ ಫಲಾನುಭವಿಗಳು ವಿಳಂಬ ಮಾಡದೆ ನೋಂದಣಿ ಮಾಡಿಕೊಂಡು ತರಬೇತಿಯ ಪ್ರಯೋಜನ ಪಡೆಯುವಂತೆ ದಕ್ಷಿಣ ಕನ್ನಡ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



