ಗೃಹಜ್ಯೋತಿ ಯೋಜನೆ: 34.76 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಸ್ಥಗಿತ! ಇಲ್ಲಿದೆ ಕಾರಣ

ಗೃಹಜ್ಯೋತಿ ಯೋಜನೆಯಡಿ ದಾಖಲೆ ಪರಿಶೀಲನೆಗೆ ಸ್ಪಂದಿಸದ ಮತ್ತು ಮನೆಗಳಲ್ಲಿ ಲಭ್ಯವಿಲ್ಲದ 34.76 ಲಕ್ಷ ಕುಟುಂಬಗಳ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯುವ ಬಗ್ಗೆ ಅನುಮಾನ ಮೂಡಿದೆ.

ಬೆಂಗಳೂರು (Bengaluru): ಗೃಹಜ್ಯೋತಿ ಯೋಜನೆ (Gruha Jyothi Scheme) ಫಲಾನುಭವಿಗಳ ದಾಖಲೆ ಪರಿಶೀಲನೆಗೆ ನಿಗದಿಪಡಿಸಿದ್ದ ಗಡುವು ಸೆಪ್ಟೆಂಬರ್ 30ಕ್ಕೆ ಮುಕ್ತಾಯಗೊಂಡಿದೆ.

ಆದರೆ, ಮನೆ ಖಾಲಿ ಇರುವುದು, ಬಾಗಿಲು ಹಾಕಿರುವುದು ಹಾಗೂ ದಾಖಲೆ ನೀಡಲು ಕೆಲವರು ನಿರಾಕರಿಸಿರುವುದರಿಂದ ಲಕ್ಷಾಂತರ ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ.

ಈ ಹಿನ್ನೆಲೆಯಲ್ಲಿ ಒಟ್ಟು 34.76 ಲಕ್ಷ ಕುಟುಂಬಗಳು ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯದಿಂದ ಹೊರಗುಳಿಯುವ ಸಾಧ್ಯತೆ ಎದುರಾಗಿದೆ. ಈ ಪೈಕಿ 29.28 ಲಕ್ಷ ಕುಟುಂಬಗಳ ಮನೆಗಳಿಗೆ ವಿವಿಧ ಕಾರಣಗಳಿಂದ ಭೇಟಿ ನೀಡಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ.

ಮತ್ತೊಂದೆಡೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ವ್ಯಾಪ್ತಿಯ 5.48 ಲಕ್ಷ ಕುಟುಂಬಗಳ ಮುಖ್ಯಸ್ಥರು ದಾಖಲೆ ಪರಿಶೀಲನೆ ವೇಳೆ ಅಗತ್ಯ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 10 ಸಾವಿರಕ್ಕೂ ಹೆಚ್ಚು ಅಕ್ರಮ ಪಿಜಿಗಳ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಸಿದ್ಧತೆ

ಗೃಹಜ್ಯೋತಿ ಯೋಜನೆಗೆ ಸೇವಾ ಸಿಂಧು (Seva Sindhu) ಮೂಲಕ ಒಟ್ಟು 1,76,61,067 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಸೇರಿದಂತೆ ವಿವಿಧ ಕಾರಣಗಳಿಂದ ಎಲ್ಲರಿಗೂ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿಲ್ಲ. ಸದ್ಯ 1,65,32,652 ಕುಟುಂಬಗಳು ಮಾತ್ರ ಯೋಜನೆಯ ಪ್ರಯೋಜನ ಪಡೆಯುತ್ತಿವೆ.

ಫಲಾನುಭವಿಗಳ ಪೈಕಿ ಅನರ್ಹರು ಇರಬಹುದೆಂಬ ಕಾರಣಕ್ಕೆ ಸರ್ಕಾರ ಜುಲೈ 1ರಿಂದ ದಾಖಲೆ ಪರಿಶೀಲನೆ ಆರಂಭಿಸಿತ್ತು. ಈ ಕೆಲಸಕ್ಕೆ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಫಲಾನುಭವಿಗಳಿಂದ ನಿರೀಕ್ಷಿತ ಸಹಕಾರ ಸಿಗದ ಕಾರಣ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ಪರಿಶೀಲನಾ ಕಾರ್ಯದಲ್ಲಿರುವ ಮೀಟರ್ ರೀಡರ್‌ಗಳು ತಿಳಿಸಿದ್ದಾರೆ.

ಕೆಲವು ಸಿಬ್ಬಂದಿಯ ಪ್ರಕಾರ, ಒಂದೇ ಮನೆಗೆ ಹಲವು ಬಾರಿ ತೆರಳಿದರೂ ನಿವಾಸಿಗಳು ಸಿಗದಿರುವ ಪ್ರಕರಣಗಳು ಸಾಕಷ್ಟಿವೆ. ವಿಶೇಷವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಬಾಗಿಲು ತೆರೆಯದಿರುವುದು ಹಾಗೂ ದಾಖಲೆ ನೀಡಲು ನಿರಾಕರಿಸುವುದು ಪರಿಶೀಲನಾ ಕಾರ್ಯಕ್ಕೆ ಅಡ್ಡಿಯಾಗಿದೆ. ರಜಾ ದಿನಗಳಲ್ಲಿಯೂ ಭೇಟಿ ನೀಡಿದರೂ ಕೆಲವು ಮನೆಗಳಲ್ಲಿ ಯಾರೂ ಲಭ್ಯವಾಗುತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

Gruha Jyothi Scheme

ಒಬ್ಬ ಮೀಟರ್ ರೀಡರ್‌ಗೆ 2,400 ಗ್ರಾಹಕರ ದಾಖಲೆ ಸಂಗ್ರಹಿಸುವ ಗುರಿ ನೀಡಲಾಗಿತ್ತು. ಈ ಪೈಕಿ 1,800 ಗ್ರಾಹಕರಿಂದ ಮಾಹಿತಿ ಪಡೆದುಕೊಳ್ಳಲಾಗಿದ್ದು, ಉಳಿದ ಪ್ರಕರಣಗಳಲ್ಲಿ ಮನೆ ಬಾಗಿಲು ಹಾಕಿರುವುದಾಗಿ ದಾಖಲಿಸಲಾಗಿದೆ. ಮತದಾರರ ಗುರುತಿನ ಚೀಟಿ (Voter ID) ಇಲ್ಲದ ಗ್ರಾಹಕರ ವಿವರಗಳನ್ನೂ ಪ್ರತ್ಯೇಕವಾಗಿ ದಾಖಲಿಸಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಆಧಾರ್ ಕಾರ್ಡ್ (Aadhaar Card) ಮತ್ತು ಮತದಾರರ ಗುರುತಿನ ಚೀಟಿ ನೀಡಲು ಕೆಲವರು ನಿರಾಕರಿಸುತ್ತಿರುವುದರಿಂದಲೂ ಪರಿಶೀಲನೆ ವಿಳಂಬವಾಗಿದೆ. ಕೆಲ ಮನೆಗಳು ನಿರಂತರವಾಗಿ ಬಂದ್ ಆಗಿರುವುದರಿಂದ ಇನ್ನೂ ನೂರಾರು ಗ್ರಾಹಕರ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಮೀಟರ್ ರೀಡರ್‌ವೊಬ್ಬರು ತಿಳಿಸಿದ್ದಾರೆ.

ಮನೆ ಬಾಗಿಲು ಹಾಕಿರುವ ಪ್ರಕರಣವನ್ನು ಸೇವಾ ಸಿಂಧು ಆ್ಯಪ್‌ನಲ್ಲಿ ದಾಖಲಿಸಿದ ಬಳಿಕ ಗ್ರಾಹಕರ ಮೊಬೈಲ್‌ಗೆ ಸಂದೇಶ ಕಳುಹಿಸಲಾಗುತ್ತದೆ. ನಂತರ ಹತ್ತಿರದ ಬೆಸ್ಕಾಂ ಕಚೇರಿಗೆ ತೆರಳಿ ಅಗತ್ಯ ಮಾಹಿತಿ ನೀಡಲು ಅವಕಾಶವಿದೆ. ಈ ಸಂದೇಶ ಪಡೆದ ಬಳಿಕ ಕೆಲವು ಮಂದಿ ದಾಖಲೆ ನೀಡಿದ್ದಾರೆ. ಆದರೆ, ಇನ್ನೂ ಹಲವು ಪ್ರಕರಣಗಳು ಬಾಕಿ ಉಳಿದಿವೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿ 5 ಕರ್ನಾಟಕ ಗ್ಯಾರಂಟಿ ಯೋಜನೆಗಳ ಬಿಗ್ ಅಪ್ಡೇಟ್

ಐದು ವಿದ್ಯುತ್ ಸರಬರಾಜು ಕಂಪನಿಗಳ ಪೈಕಿ ಬೆಸ್ಕಾಂ ಮತ್ತು ಮೆಸ್ಕಾಂ ವ್ಯಾಪ್ತಿಯಲ್ಲಿ ದಾಖಲೆ ಸಂಗ್ರಹ ಕಾರ್ಯ ಉತ್ತಮವಾಗಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಳಿದ ಪ್ರದೇಶಗಳಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪರಿಶೀಲನೆಗೆ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡುವಂತೆ ಇಂಧನ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪರಿಶೀಲನೆ ಪೂರ್ಣಗೊಂಡ ನಂತರ ಅಗತ್ಯ ದಾಖಲೆಗಳನ್ನು ಹೊಂದಿರದ ಅಥವಾ ಅರ್ಹತೆ ಸಾಬೀತುಪಡಿಸಲು ಸಾಧ್ಯವಾಗದ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡುವ ಸಾಧ್ಯತೆ ಇದೆ.

ಆದರೆ, ನಿಜವಾದ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ಮತ್ತೊಂದು ಅವಕಾಶ ನೀಡುವ ಕುರಿತು ಅಧಿಕಾರಿಗಳು ಚರ್ಚಿಸಿದ್ದಾರೆ.

ಮನೆ ಖಾಲಿ ಅಥವಾ ಬಾಗಿಲು ಹಾಕಿರುವ ಪ್ರಕರಣಗಳಲ್ಲಿ ಮುಂದಿನ ಅವಕಾಶದಲ್ಲಿಯೂ ಮಾಹಿತಿ ನೀಡದಿದ್ದರೆ, ಅಂತಹ ಗ್ರಾಹಕರನ್ನು ಅನರ್ಹರೆಂದು ಪರಿಗಣಿಸಿ ಗೃಹಜ್ಯೋತಿ ಸೌಲಭ್ಯ ಕಡಿತಗೊಳಿಸುವ ಸಾಧ್ಯತೆ ಇದೆ. ಈ ಕುರಿತು ಅಂತಿಮ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories