ಬೆಂಗಳೂರು: 10 ಸಾವಿರಕ್ಕೂ ಹೆಚ್ಚು ಅಕ್ರಮ ಪಿಜಿಗಳ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಸಿದ್ಧತೆ
ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಪಿಜಿಗಳ ವಿರುದ್ಧ ಜಿಬಿಎ ಕ್ರಮಕ್ಕೆ ಸಿದ್ಧವಾಗಿದ್ದು, 10 ಸಾವಿರಕ್ಕೂ ಹೆಚ್ಚು ಪಿಜಿಗಳಿಗೆ 15 ದಿನಗಳ ನೋಟಿಸ್ ನೀಡುವ ಸಾಧ್ಯತೆ ಇದೆ.

- ಅಕ್ರಮ ಪಿಜಿಗಳ ವಿರುದ್ಧ ಜಿಬಿಎ ಕಠಿಣ ಕ್ರಮಕ್ಕೆ ಸಿದ್ಧತೆ
- 10 ಸಾವಿರಕ್ಕೂ ಹೆಚ್ಚು ಪಿಜಿಗಳು ನಿಯಮ ಉಲ್ಲಂಘನೆ
- ಮೂಲಸೌಕರ್ಯ ಸಂಪರ್ಕ ಕಡಿತದ ಸಾಧ್ಯತೆ
ಬೆಂಗಳೂರು (Bengaluru), ಅಕ್ಟೋಬರ್ 3: ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಪಿಜಿಗಳ (PG) ವಿರುದ್ಧ ಜಿಬಿಎ (GBA) ಅಧಿಕಾರಿಗಳು ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ. ಕೋರ್ಟ್ ಸೂಚನೆಯ ಹಿನ್ನೆಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ ನಗರದಲ್ಲಿರುವ ಸಾವಿರಾರು ಪಿಜಿಗಳು ಅಗತ್ಯ ನಿಯಮಗಳನ್ನು ಪಾಲಿಸದಿರುವುದು ಬೆಳಕಿಗೆ ಬಂದಿದೆ ಎಂದು ಜಿಬಿಎ ತಿಳಿಸಿದೆ.
ಜಿಬಿಎ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಸುಮಾರು 25 ಸಾವಿರ ಪಿಜಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಪೈಕಿ 10 ಸಾವಿರಕ್ಕೂ ಹೆಚ್ಚು ಪಿಜಿಗಳು ನಿಯಮ ಉಲ್ಲಂಘಿಸಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಕೆಲವು ಪಿಜಿಗಳಲ್ಲಿ ಅಗತ್ಯ ಪರವಾನಗಿ, ಕಟ್ಟಡದ ಅನುಮೋದಿತ ನಕ್ಷೆ ಮತ್ತು ಅಗ್ನಿ ಸುರಕ್ಷತಾ ಪ್ರಮಾಣಪತ್ರ (Fire Safety Certificate) ಇಲ್ಲದಿರುವುದು ಗಮನಕ್ಕೆ ಬಂದಿದೆ.
ನಿಯಮ ಉಲ್ಲಂಘಿಸಿರುವ ಪಿಜಿಗಳಿಗೆ 15 ದಿನಗಳ ನೋಟಿಸ್ ನೀಡುವಂತೆ ಕೋರ್ಟ್ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಜಿಬಿಎ, ಬೆಸ್ಕಾಂ (BESCOM) ಹಾಗೂ ಜಲಮಂಡಳಿ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದ್ದಾರೆ. ಅಗತ್ಯವಿದ್ದರೆ ನಿಯಮ ಪಾಲಿಸದ ಪಿಜಿಗಳಿಗೆ ಮೂಲಸೌಕರ್ಯ ಸಂಪರ್ಕ ಕಡಿತಗೊಳಿಸುವ ಕ್ರಮವೂ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರು: ಸಿಲಿಂಡರ್ ಸ್ಫೋಟ! ಒಂದೇ ಕುಟುಂಬದ 6 ಮಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ
ಪಿಜಿ ಮಾಲೀಕರು ನಿವಾಸಿಗಳ ಸುರಕ್ಷತೆ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸಿಸಿಟಿವಿ (CCTV) ಅಳವಡಿಸಿ, ಕನಿಷ್ಠ 30 ದಿನಗಳ ವಿಡಿಯೋ ಬ್ಯಾಕಪ್ ಇರಬೇಕು. ಪ್ರತಿಯೊಬ್ಬ ನಿವಾಸಿಗೆ ಕನಿಷ್ಠ 70 ಚದರ ಅಡಿ ವಿಸ್ತೀರ್ಣದ ಜಾಗ ಒದಗಿಸುವ ನಿಯಮವೂ ಇದೆ.
ಇದರ ಜೊತೆಗೆ ಸ್ವಚ್ಛವಾದ ಸ್ನಾನಗೃಹ ಮತ್ತು ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆ ಇರಬೇಕು. ನಿವಾಸಿಗಳ ಸುರಕ್ಷತೆಗಾಗಿ 24 ಗಂಟೆಯೂ ಸೆಕ್ಯುರಿಟಿ ಸಿಬ್ಬಂದಿ (Security) ಇರಿಸುವುದು ಕಡ್ಡಾಯವಾಗಿದೆ.
ಪಿಜಿಯಲ್ಲಿ ಸ್ವಂತ ಅಡುಗೆಮನೆ ಇದ್ದರೆ ಮೂರು ತಿಂಗಳೊಳಗೆ ಎಫ್‌ಎಸ್‌ಎಸ್‌ಎಐ (FSSAI) ಪರವಾನಗಿ ಪಡೆಯಬೇಕು. ವಾಣಿಜ್ಯ ಪರವಾನಗಿ ಪಡೆಯುವ ಮುನ್ನ ಅಗ್ನಿ ಸುರಕ್ಷತಾ ಪ್ರಮಾಣಪತ್ರ ಹೊಂದಿರುವುದೂ ಕಡ್ಡಾಯವಾಗಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ: ಮುಂದಿನ 10 ದಿನ ಭಾರೀ ಮಳೆ ಮುನ್ಸೂಚನೆ! ಬೆಂಗಳೂರು ಭಾಗದಲ್ಲಿ ಮೋಡ ಕವಿದ ವಾತಾವರಣ
ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಪಿಜಿಗಳಿವೆ ಎಂದು ಪಿಜಿ ಅಸೋಸಿಯೇಷನ್ ತಿಳಿಸಿದೆ. ನಿಯಮ ಉಲ್ಲಂಘಿಸುವ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದು ಅಸೋಸಿಯೇಷನ್ ಹೇಳಿದೆ.
ಇದೀಗ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಜಿಬಿಎ ಯಾವ ರೀತಿಯ ಕ್ರಮ ಜರುಗಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.



