ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್: ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್, ಪವಿತ್ರಾಗೌಡರನ್ನೇ ನೋಡಿಲ್ಲ ಎಂದ ವಾಚ್‌ಮ್ಯಾನ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಪಟ್ಟಣಗೆರೆ ಶೆಡ್‌ನ ವಾಚ್‌ಮ್ಯಾನ್ ನರೇಂದ್ರ ಸಿಂಗ್ ನೀಡಿದ ಹೇಳಿಕೆ ಕುತೂಹಲ ಮೂಡಿಸಿದೆ. ದರ್ಶನ್, ಪವಿತ್ರಾಗೌಡ ಸೇರಿದಂತೆ ಹಲವು ಆರೋಪಿಗಳನ್ನು ನೋಡಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಬೆಂಗಳೂರು (Bengaluru): ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ವಿಚಾರಣೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿದಿದ್ದು, ಪಟ್ಟಣಗೆರೆ ಶೆಡ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ನರೇಂದ್ರ ಸಿಂಗ್ ಅವರ ಹೇಳಿಕೆ ಈಗ ಗಮನ ಸೆಳೆದಿದೆ.

ಪ್ರಕರಣದ ಆರೋಪಿಗಳ ಪೈಕಿ ವಿನಯ್ ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ತಾನು ನೋಡಿಲ್ಲ ಎಂದು ಆತ ನ್ಯಾಯಾಲಯದಲ್ಲಿ ತಿಳಿಸಿದ್ದಾನೆ.

ವಿಚಾರಣೆ ವೇಳೆ ನರೇಂದ್ರ ಸಿಂಗ್ ಹಿಂದಿ ಭಾಷೆಯಲ್ಲೇ ಉತ್ತರ ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ (SPP) ಪ್ರಸನ್ನ ಕುಮಾರ್ ಅವರು ಹಿಂದಿಯಲ್ಲಿಯೇ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು. ಹಿಂದಿ ಹೊರತುಪಡಿಸಿ ಬೇರೆ ಭಾಷೆ ಮಾತನಾಡಲು ಬರುತ್ತದೆಯೇ ಎಂಬ ಪ್ರಶ್ನೆಗೆ, ಬೇರೆ ಭಾಷೆ ಮಾತ್ರವಲ್ಲ ಕನ್ನಡವೂ ಅರ್ಥವಾಗುವುದಿಲ್ಲ ಎಂದು ವಾಚ್‌ಮ್ಯಾನ್ ಹೇಳಿದ್ದಾರೆ. ಹೀಗಾಗಿ ಮುಂದಿನ ವಿಚಾರಣೆಗೆ ಭಾಷಾಂತರಕಾರರ ನೆರವು ಪಡೆಯುವ ಅಗತ್ಯವೂ ಎದುರಾಗಿದೆ.

2024ರ ಜೂನ್ 8ರಂದು ಪಟ್ಟಣಗೆರೆ ಶೆಡ್‌ನಲ್ಲಿ ಯಾವುದೇ ಅಸಹಜ ಘಟನೆ ನಡೆದಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂಬುದು ನರೇಂದ್ರ ಸಿಂಗ್ ಅವರ ಹೇಳಿಕೆಯಾಗಿದೆ. ಅಂದು ಎಂದಿನಂತೆ ವಾಹನಗಳು ಬಂದು ಹೋಗುತ್ತಿದ್ದವು. ಬೇರೆ ಯಾವುದೇ ಘಟನೆ ನಡೆದಿರುವುದನ್ನು ತಾನು ನೋಡಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದೇ ವೇಳೆ ನಟ ದರ್ಶನ್ (Darshan), ಪವಿತ್ರಾಗೌಡ (Pavithra Gowda) ಸೇರಿದಂತೆ ಪ್ರಕರಣದಲ್ಲಿ ಜೈಲಿನಲ್ಲಿರುವ ಇತರ ಆರೋಪಿಗಳನ್ನು ಗುರುತಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಎ10 ಆರೋಪಿ ವಿನಯ್ ಅವರನ್ನು ಮಾತ್ರ ನೋಡಿರುವುದಾಗಿ ಹೇಳಿದ್ದಾರೆ. ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಕೂಡ ತಾನು ಯಾವುದೇ ಘಟನೆಯನ್ನು ನೋಡಿಲ್ಲ ಎಂದು ಸಾಕ್ಷ್ಯ ನೀಡಿದ್ದಾರೆ.

ಸಾಕ್ಷಿಗಳ ಈ ಹೇಳಿಕೆಗಳನ್ನು ಗಮನಿಸಿದ ವಿಶೇಷ ಸರ್ಕಾರಿ ಅಭಿಯೋಜಕರು ನರೇಂದ್ರ ಸಿಂಗ್ ಅವರನ್ನು ಪ್ರತಿಕೂಲ ಸಾಕ್ಷಿ (Hostile Witness) ಎಂದು ಪರಿಗಣಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ನ್ಯಾಯಾಲಯದ ಅನುಮತಿ ದೊರೆತ ಬಳಿಕ ಅವರ ವಿಚಾರಣೆಯನ್ನು ಮುಂದುವರಿಸಲು ಪಾಟಿ ಸವಾಲು (Cross-Examination) ಪ್ರಕ್ರಿಯೆ ಆರಂಭಿಸಲಾಯಿತು.

ಆದರೆ, ಪಾಟಿ ಸವಾಲನ್ನು ಸೋಮವಾರಕ್ಕೆ ಮುಂದೂಡುವಂತೆ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು. ಇದಕ್ಕೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದರು. ಸ್ವಲ್ಪ ವಿಚಾರಣೆ ನಡೆಸಿ ಮತ್ತೆ ಮುಂದೂಡುವುದರಿಂದ ಪ್ರಕರಣದ ವಿಚಾರಣೆ ಅನಗತ್ಯವಾಗಿ ವಿಳಂಬವಾಗಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಅಭಿಯೋಜಕರು, ಸಾಕ್ಷಿ ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುವುದರಿಂದ ಅದೇ ಭಾಷೆಯಲ್ಲಿ ಪಾಟಿ ಸವಾಲು ನಡೆಸಬೇಕಿದೆ. ಅದಕ್ಕಾಗಿ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಂತಿಮವಾಗಿ ನರೇಂದ್ರ ಸಿಂಗ್ ಮತ್ತು ಶೆಡ್ ಕೆಲಸಗಾರ ಕಿರಣ್ ಅವರ ಪಾಟಿ ಸವಾಲು ಪ್ರಕ್ರಿಯೆಯನ್ನು ಸೋಮವಾರಕ್ಕೆ ಮುಂದೂಡಲಾಯಿತು.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories