Bengaluru: ಬೆಂಗಳೂರು ಜನನಿಬಿಡ ರಸ್ತೆಯಲ್ಲಿ ಮಹಿಳೆ ಭೀಕರ ಹತ್ಯೆ; ಮಚ್ಚಿನಿಂದ ಕತ್ತು ಸೀಳಿ ಪರಾರಿ

ಮೊಮ್ಮಗನಿಗೆ ಊಟ ನೀಡಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿ ಜನನಿಬಿಡ ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

  • ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ ಮಹಿಳೆ ಕೊಲೆ
  • ಮಚ್ಚಿನಿಂದ ಕತ್ತು ಸೀಳಿ ದುಷ್ಕರ್ಮಿ ಪರಾರಿ
  • ಬೆಂಗಳೂರು ಉತ್ತರ ಭಾಗದ ಕುದುರೆಗೆರೆ ಘಟನೆ

ಬೆಂಗಳೂರು (Bengaluru): ಬೆಂಗಳೂರು ನಗರದಲ್ಲಿ ಹಾಡಹಗಲೇ ನಡೆದ ಭೀಕರ ಹತ್ಯೆ ಪ್ರಕರಣ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನನಿಬಿಡ ರಸ್ತೆಯಲ್ಲೇ ಮಹಿಳೆಯೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮೃತ ಮಹಿಳೆಯನ್ನು 55 ವರ್ಷದ ದ್ರಾಕ್ಷಾಯಿಣಿ ಎಂದು ಗುರುತಿಸಲಾಗಿದೆ. ಬೆಂಗಳೂರು ಉತ್ತರ (Bengaluru North) ತಾಲೂಕಿನ ಕುದುರೆಗೆರೆ ಗ್ರಾಮದ ನಿವಾಸಿಯಾಗಿದ್ದ ದ್ರಾಕ್ಷಾಯಿಣಿ, ಮಧ್ಯಾಹ್ನ ತನ್ನ ಮೊಮ್ಮಗನ ಶಾಲೆಗೆ ಊಟ ನೀಡಲು ತೆರಳಿ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು ನಡು ರಸ್ತೆಯಲ್ಲಿ ರಕ್ತಪಾತ; ಖಾರದ ಪುಡಿ ಎರಚಿ ರೌಡಿಶೀಟರ್ ಶಬ್ಬೀರ್ ಕೊಲೆ

ಬೈಕ್‌ನಲ್ಲಿ ಬಂದು ಏಕಾಏಕಿ ದಾಳಿ

ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ದ್ರಾಕ್ಷಾಯಿಣಿಯನ್ನು ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಅಡ್ಡಗಟ್ಟಿದ್ದಾನೆ. ಯಾವುದೇ ಮಾತುಕತೆ ಇಲ್ಲದೆ ಏಕಾಏಕಿ ಮಚ್ಚಿನಿಂದ ಆಕೆಯ ಕತ್ತಿಗೆ ಪ್ರಾಣಾಂತಿಕವಾಗಿ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ದಾಳಿಯ ತೀವ್ರತೆಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನಾ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹದ ಬಳಿ ಅಪರಾಧಕ್ಕೆ ಬಳಸಿದ ಮಚ್ಚು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಾಡಹಗಲೇ ನಡೆದ ಈ ಕೊಲೆ ಪ್ರಕರಣ ಸ್ಥಳೀಯ ನಿವಾಸಿಗಳಲ್ಲಿ ಭಯ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಕೊಲೆ ಪೂರ್ವಯೋಜಿತ ಎಂಬ ಶಂಕೆ

ಮಾಹಿತಿ ಪಡೆದ ತಕ್ಷಣ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದ್ರಾಕ್ಷಾಯಿಣಿಯ ಕುಟುಂಬಸ್ಥರು ಈ ಕೊಲೆ ಹಿಂದೆ ಪೂರ್ವಯೋಜನೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಸಂಬಂಧಿಕರ ಪಾತ್ರವಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಆರೋಪಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಲಾಗಿದೆ.

English Summary▼

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories