ಈ 5 ಆದಾಯಗಳಿಗೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ! ಸಂಪೂರ್ಣ Tax Free ಆದಾಯಗಳ ಪಟ್ಟಿ ಇಲ್ಲಿದೆ
Tax Free income: ಆದಾಯ ತೆರಿಗೆ ನಿಯಮಗಳ ಪ್ರಕಾರ ಕೆಲವು ವಿಶೇಷ ಆದಾಯಗಳ ಮೇಲೆ ಸರ್ಕಾರ ಯಾವುದೇ ತೆರಿಗೆ ವಿಧಿಸುವುದಿಲ್ಲ. ಕೃಷಿ ಆದಾಯದಿಂದ ಹಿಡಿದು PPF, EPF ಮತ್ತು ಸುಕನ್ಯ ಯೋಜನೆಗಳ ಲಾಭವೂ ಸಂಪೂರ್ಣವಾಗಿ ಟ್ಯಾಕ್ಸ್ ಫ್ರೀ ಆಗಿರುತ್ತದೆ.

Tax Free income in India: ಆದಾಯ ತೆರಿಗೆ ಸಲ್ಲಿಸುವ ಸಮಯದಲ್ಲಿ ಬಹುತೇಕ ಜನರು ಯಾವ ಆದಾಯಕ್ಕೆ ತೆರಿಗೆ ಪಾವತಿಸಬೇಕು, ಯಾವದಕ್ಕೆ ಬೇಡ ಎಂಬ ಗೊಂದಲದಲ್ಲಿರುತ್ತಾರೆ. ಸರ್ಕಾರದ ನಿಯಮಗಳ ಪ್ರಕಾರ ಕೆಲವು ಆದಾಯಗಳು ಸಂಪೂರ್ಣವಾಗಿ ತೆರಿಗೆ ರಹಿತವಾಗಿವೆ.
2025–26 ಹಣಕಾಸು ವರ್ಷದ ಆದಾಯ ತೆರಿಗೆ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತಿರುವ ಸಂದರ್ಭದಲ್ಲಿ, ತೆರಿಗೆ ಪಾವತಿಸಬೇಕಾಗದ ಕೆಲವು ಪ್ರಮುಖ ಆದಾಯಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇವುಗಳಿಂದ ಬಂದ ಹಣಕ್ಕೆ ಸರ್ಕಾರಕ್ಕೆ ಒಂದು ರೂಪಾಯಿಯೂ ತೆರಿಗೆ ನೀಡಬೇಕಾಗುವುದಿಲ್ಲ.
ಹೊಸ ತೆರಿಗೆ ವ್ಯವಸ್ಥೆಯಲ್ಲಿ ವಾರ್ಷಿಕ ₹12 ಲಕ್ಷವರೆಗೆ ಆದಾಯಕ್ಕೆ ತೆರಿಗೆ ಇಲ್ಲ. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ₹7 ಲಕ್ಷವರೆಗೆ ತೆರಿಗೆ ವಿನಾಯಿತಿ ಇದೆ. ಆದರೆ ಈ ಮಿತಿಯನ್ನು ಮೀರಿ ಆದಾಯ ಬಂದರೂ ಕೆಲವು ಮೂಲಗಳಿಂದ ಬಂದ ಹಣಕ್ಕೆ ತೆರಿಗೆ ವಿಧಿಸುವುದಿಲ್ಲ.
ಕೃಷಿಯಿಂದ ಬಂದ ಆದಾಯ
ಭಾರತದಲ್ಲಿ ಕೃಷಿ ಆದಾಯ ಸಂಪೂರ್ಣವಾಗಿ ತೆರಿಗೆ ರಹಿತವಾಗಿದೆ. ರೈತರು ಬೆಳೆ ಬೆಳೆಸಿ ಮಾರಾಟ ಮಾಡಿದ ಹಣ ಅಥವಾ ತಮ್ಮ ಕೃಷಿ ಭೂಮಿಯನ್ನು ಬಾಡಿಗೆಗೆ ನೀಡಿದ ಹಣಕ್ಕೂ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ.
ಆದರೆ ಕೃಷಿ ಆದಾಯ ₹5,000 ಕ್ಕಿಂತ ಹೆಚ್ಚು ಇದ್ದು, ಒಟ್ಟು ಆದಾಯ ತೆರಿಗೆ ಮಿತಿಯನ್ನು ಮೀರುತ್ತಿದ್ದರೆ ಮಾತ್ರ ತೆರಿಗೆ ದರ ನಿರ್ಧಾರ ಮಾಡುವಾಗ ಅದನ್ನು ಪರಿಗಣಿಸಬಹುದು. ಆದರೂ ಕೃಷಿಯಿಂದ ಬಂದ ಹಣಕ್ಕೆ ನೇರ ತೆರಿಗೆ ವಿಧಿಸುವುದಿಲ್ಲ.
PPF ಹೂಡಿಕೆಯ ಲಾಭ
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಭಾರತದ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ, ಅದರಿಂದ ದೊರೆಯುವ ಬಡ್ಡಿ ಮತ್ತು ಮೆಚ್ಯುರಿಟಿ ಮೊತ್ತ, ಮೂರು ತೆರಿಗೆ ರಹಿತವಾಗಿವೆ.
ಪ್ರಸ್ತುತ PPF ಮೇಲೆ ಸುಮಾರು 7.1% ಬಡ್ಡಿ ದೊರೆಯುತ್ತದೆ. ವರ್ಷಕ್ಕೆ ₹1.5 ಲಕ್ಷವರೆಗೆ ಹೂಡಿಕೆ ಮಾಡಬಹುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತ ಸೌಲಭ್ಯವೂ ಇದೆ.
EPF ಹಣ ಮತ್ತು ಬಡ್ಡಿ
ಒಬ್ಬ ಉದ್ಯೋಗಿ ಕಂಪನಿಯಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಕೆಲಸ ಮಾಡಿದರೆ, EPF ಖಾತೆಯಿಂದ ಹಣ ತೆಗೆಯುವಾಗ ತೆರಿಗೆ ವಿಧಿಸಲಾಗುವುದಿಲ್ಲ. ಉದ್ಯೋಗಿ ಮತ್ತು ಕಂಪನಿ ಕೊಡುಗೆಗಳ ಜೊತೆಗೆ ಅವುಗಳ ಮೇಲೆ ಬಂದ ಬಡ್ಡಿಯೂ ತೆರಿಗೆ ರಹಿತವಾಗಿರುತ್ತದೆ.
ಈ ಕಾರಣದಿಂದ EPF ಹೂಡಿಕೆ ದೀರ್ಘಕಾಲಿಕ ಉಳಿತಾಯಕ್ಕೆ ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತದೆ.
ಲೈಫ್ ಇನ್ಸುರನ್ಸ್ ಮೆಚ್ಯುರಿಟಿ ಹಣ
ಜೀವ ವಿಮಾ ಪಾಲಿಸಿ ಮೆಚ್ಯುರಿಟಿ ಆದಾಗ ದೊರೆಯುವ ಹಣವೂ ಸಾಮಾನ್ಯವಾಗಿ ತೆರಿಗೆ ರಹಿತವಾಗಿರುತ್ತದೆ. ಪಾಲಿಸಿ ಪ್ರೀಮಿಯಂ ಮೊತ್ತವು ವಿಮಾ ಕವರ್ ಮೊತ್ತದ 10% ಮೀರದಿದ್ದರೆ ಈ ಸೌಲಭ್ಯ ಅನ್ವಯಿಸುತ್ತದೆ.
ಪಾಲಿಸಿ ಹೊಂದಿದ್ದ ವ್ಯಕ್ತಿ ಮೃತಪಟ್ಟ ನಂತರ ನಾಮಿನಿಗೆ ಸಿಗುವ ಡೆತ್ ಬೆನಿಫಿಟ್ ಮೇಲೂ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
ಸುಕನ್ಯ ಸಮೃದ್ಧಿ ಯೋಜನೆ ಲಾಭ
ಮಕ್ಕಳ ಭವಿಷ್ಯಕ್ಕಾಗಿ ಆರಂಭಿಸಲಾದ ಸುಕನ್ಯ ಸಮೃದ್ಧಿ ಯೋಜನೆ ಕೂಡ ಅತ್ಯುತ್ತಮ ತೆರಿಗೆ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ವರ್ಷಕ್ಕೆ ₹1.5 ಲಕ್ಷವರೆಗೆ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತ, ಅದರ ಮೇಲೆ ಬಂದ ಬಡ್ಡಿ ಹಾಗೂ ಮೆಚ್ಯುರಿಟಿ ಮೊತ್ತ ಸಂಪೂರ್ಣವಾಗಿ ತೆರಿಗೆ ರಹಿತವಾಗಿರುತ್ತದೆ. ಇದರಿಂದ ಪೋಷಕರು ತೆರಿಗೆ ಉಳಿತಾಯ ಮಾಡುವ ಜೊತೆಗೆ ಮಗಳ ಭವಿಷ್ಯಕ್ಕಾಗಿ ಉತ್ತಮ ನಿಧಿ ನಿರ್ಮಿಸಬಹುದು.



