ಸೋಲಾರ್ ವ್ಯವಹಾರ ಆರಂಭಿಸುವವರಿಗೆ ಗುಡ್ ನ್ಯೂಸ್: ಸಿಗುತ್ತೆ ಭರ್ಜರಿ ಲೋನ್ ಅವಕಾಶ
ಪಿಎಂ ಸೂರ್ಯ ಘರ್ ಯೋಜನೆಯಡಿ ನೋಂದಾಯಿತ ಸೋಲಾರ್ ಇನ್ಸ್ಟಾಲೇಶನ್ ಕಂಪನಿಗಳಿಗೆ ಕಾರ್ಯಾಚರಣಾ ಬಂಡವಾಳ ಒದಗಿಸಲು ಕೇಂದ್ರ ಸರ್ಕಾರ ಹೊಸ ಸಾಲ ಸೌಲಭ್ಯ ಜಾರಿಗೊಳಿಸಿದ್ದು, ಡಿಜಿಟಲ್ ಮೂಲಕವೇ ಅರ್ಜಿ ಪ್ರಕ್ರಿಯೆ ನಡೆಯಲಿದೆ.

ರೂಫ್ಟಾಪ್ ಸೋಲಾರ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕಂಪನಿಗಳಿಗೆ ಹಣಕಾಸಿನ ಬೆಂಬಲ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿ ಅರ್ಹ ಸಂಸ್ಥೆಗಳು ₹10 ಲಕ್ಷದಿಂದ ₹5 ಕೋಟಿ ತನಕ ಕಾರ್ಯನಿರ್ವಹಣಾ ಬಂಡವಾಳ ಸಾಲ ಪಡೆಯಬಹುದು.
ಈ ಯೋಜನೆ ವೈಯಕ್ತಿಕ ಗ್ರಾಹಕರಿಗಾಗಿ ಅಲ್ಲ. ಸೋಲಾರ್ ಪ್ಯಾನಲ್ ಅಳವಡಿಸುವ ಸಣ್ಣ ಹಾಗೂ ಮಧ್ಯಮ ಉದ್ಯಮಗಳು, ಅಧಿಕೃತ ವೆಂಡರ್ಗಳು, ಚಾನಲ್ ಪಾಲುದಾರರು ಮತ್ತು ಉಪಗುತ್ತಿಗೆದಾರರು ಮಾತ್ರ ಅರ್ಜಿ ಸಲ್ಲಿಸಬಹುದು. ಸಂಬಂಧಿತ ಸರ್ಕಾರಿ ಸಂಸ್ಥೆಗಳಲ್ಲಿ ನೋಂದಣಿ ಕಡ್ಡಾಯವಾಗಿದೆ.
ಬ್ಯಾಂಕ್ಗಳು ಈ ಯೋಜನೆಯಡಿ ಕ್ಯಾಶ್ ಕ್ರೆಡಿಟ್ ಸೌಲಭ್ಯ ಒದಗಿಸಲಿದ್ದು, ಕಂಪನಿಗಳು ಅಗತ್ಯವಿರುವ ಸಮಯದಲ್ಲಿ ಹಣ ಬಳಸಿಕೊಳ್ಳಬಹುದು. ಪ್ಯಾನಲ್ ಖರೀದಿ, ಕಾರ್ಮಿಕರ ವೇತನ, ಯೋಜನಾ ವೆಚ್ಚ ಮತ್ತು ಇತರೆ ಕಾರ್ಯಾಚರಣಾ ಅಗತ್ಯಗಳಿಗೆ ಈ ಮೊತ್ತವನ್ನು ಬಳಸುವ ಅವಕಾಶ ಇದೆ.
ಸಂಸ್ಥೆ ಕನಿಷ್ಠ ಆರು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರಬೇಕು ಹಾಗೂ ಇತ್ತೀಚಿನ ಅವಧಿಯಲ್ಲಿ ಕನಿಷ್ಠ 10 ಸೋಲಾರ್ ಯೋಜನೆಗಳನ್ನು ಪೂರ್ಣಗೊಳಿಸಿರಬೇಕು. ಜೊತೆಗೆ ಉದ್ಯಮ್ ಹಾಗೂ ಜಿಎಸ್ಟಿ ನೋಂದಣಿ, ಉತ್ತಮ ಕ್ರೆಡಿಟ್ ದಾಖಲೆ ಮತ್ತು ಮಾನ್ಯತೆ ಪಡೆದ ವೆಂಡರ್ ಸ್ಥಾನಮಾನ ಅಗತ್ಯ.
ಯೋಜನೆಯ ಎಲ್ಲಾ ವಹಿವಾಟುಗಳು ವಿಶೇಷ ಕ್ಯಾಶ್ ಕ್ರೆಡಿಟ್ ಖಾತೆಯ ಮೂಲಕ ನಡೆಯಲಿದ್ದು, ಗ್ರಾಹಕರಿಂದ ಬರುವ ಹಣವೂ ಅದೇ ಖಾತೆಗೆ ಜಮೆಯಾಗಬೇಕು. ಇದರಿಂದ ಬ್ಯಾಂಕ್ಗಳಿಗೆ ಹಣದ ಹರಿವನ್ನು ಸುಲಭವಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ.
ಸಾಲದಿಂದ ಖರೀದಿಸಿದ ವಸ್ತುಗಳಿಗೆ ವಿಮೆ ಕಡ್ಡಾಯವಾಗಿದ್ದು, ಬೆಂಕಿ, ಕಳ್ಳತನ ಹಾಗೂ ಪ್ರಕೃತಿ ವಿಕೋಪಗಳಿಂದ ರಕ್ಷಣೆ ಪಡೆಯಬೇಕು. ಬ್ಯಾಂಕ್ಗಳು ನಿಯಮಿತವಾಗಿ ಯೋಜನೆಗಳ ಪ್ರಗತಿ ಮತ್ತು ಸಾಲದ ಬಳಕೆಯನ್ನು ಪರಿಶೀಲಿಸುತ್ತವೆ.
ಕೇಂದ್ರ ಸರ್ಕಾರದ ಈ ಕ್ರಮದಿಂದ ಸೋಲಾರ್ ಕ್ಷೇತ್ರದಲ್ಲಿ ಹೊಸ ಹೂಡಿಕೆಗಳು ಹೆಚ್ಚುವ ಸಾಧ್ಯತೆ ಇದ್ದು, ಸ್ವಚ್ಛ ಇಂಧನ ಬಳಕೆಯನ್ನು ಮತ್ತಷ್ಟು ವಿಸ್ತರಿಸುವ ಗುರಿಗೂ ಇದು ನೆರವಾಗಲಿದೆ.



