ನಿಮ್ಮ ಆಧಾರ್ ಸುರಕ್ಷಿತವೇ? ಈ ರೀತಿ ನಿಮ್ಮ ಆಧಾರ್ ಕಾರ್ಡ್ ದುರುಪಯೋಗ ಪತ್ತೆ ಹಚ್ಚಿ
ಆಧಾರ್ ಮಾಹಿತಿ ಕಳ್ಳತನ ಮತ್ತು ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, UIDAI ನೀಡಿರುವ ವಿಶೇಷ ಸೌಲಭ್ಯದ ಮೂಲಕ ನಿಮ್ಮ ಆಧಾರ್ ಎಲ್ಲೆಲ್ಲಿ ಬಳಸಲಾಗಿದೆ ಎಂಬುದನ್ನು ಸುಲಭವಾಗಿ ಪರಿಶೀಲಿಸಿ ಭದ್ರತೆ ಹೆಚ್ಚಿಸಬಹುದು.

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಳಕೆ ಪ್ರತಿಯೊಂದು ಕ್ಷೇತ್ರದಲ್ಲೂ ಹೆಚ್ಚುತ್ತಿರುವ ಕಾರಣ, ಅದರ ಸುರಕ್ಷತೆಯೂ ಅಷ್ಟೇ ಮಹತ್ವ ಪಡೆದುಕೊಂಡಿದೆ. ಬ್ಯಾಂಕಿಂಗ್ ಸೇವೆಗಳು, ಮೊಬೈಲ್ ಸಂಪರ್ಕ, ಸರ್ಕಾರಿ ಯೋಜನೆಗಳು ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಕಡ್ಡಾಯವಾಗಿರುವುದರಿಂದ, ಅದರ ದುರುಪಯೋಗದ ಅಪಾಯವೂ ಏರಿಕೆಯಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನಾಗರಿಕರಿಗೆ ಉಪಯುಕ್ತ ಭದ್ರತಾ ವ್ಯವಸ್ಥೆಯನ್ನು ಒದಗಿಸಿದೆ. ಮೈಸಾಧಾರ್ (My Aadhaar) ಪೋರ್ಟಲ್‌ನಲ್ಲಿ ಲಾಗಿನ್ ಆಗುವ ಮೂಲಕ ನಿಮ್ಮ ಆಧಾರ್ ಎಲ್ಲಿ, ಯಾವಾಗ ಮತ್ತು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಈ ಸೇವೆ ಬಳಸಲು ಮೊದಲು My Aadhaar ಪೋರ್ಟಲ್‌ಗೆ ಭೇಟಿ ನೀಡಿ, ಆಧಾರ್ ಸಂಖ್ಯೆಯ ಮೂಲಕ ಲಾಗಿನ್ ಆಗಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿದ ಬಳಿಕ “Authentication History” ವಿಭಾಗವನ್ನು ತೆರೆಯಬೇಕು. ಅಲ್ಲಿ ಕಳೆದ ಆರು ತಿಂಗಳ ಅವಧಿಯ ಮಾಹಿತಿ ವೀಕ್ಷಿಸಲು ಅವಕಾಶ ನೀಡಲಾಗಿದೆ.
ವರದಿಯಲ್ಲಿ ಆಧಾರ್ ದೃಢೀಕರಣದ ದಿನಾಂಕ, ಸಮಯ, ವಿಧಾನ ಹಾಗೂ ಯಾವ ಸಂಸ್ಥೆ ಆಧಾರ್ ಬಳಕೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಬ್ಯಾಂಕ್, ಟೆಲಿಕಾಂ ಕಂಪನಿ ಅಥವಾ ಸರ್ಕಾರಿ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಬಳಕೆ ವಿವರಗಳು ಅಲ್ಲಿ ಕಾಣಿಸಿಕೊಳ್ಳುತ್ತವೆ.
ನಿಮಗೆ ತಿಳಿಯದ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳುವುದು ಅಗತ್ಯ. UIDAI ಸಹಾಯವಾಣಿ 1947ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು. ಜೊತೆಗೆ ಬಯೋಮೆಟ್ರಿಕ್ ಲಾಕ್ ಸೌಲಭ್ಯವನ್ನು ಸಕ್ರಿಯಗೊಳಿಸುವ ಮೂಲಕ ಬೆರಳಚ್ಚು ಮತ್ತು ಐರಿಸ್ ಮಾಹಿತಿಯನ್ನು ರಕ್ಷಿಸಬಹುದು.
ಡಿಜಿಟಲ್ ಯುಗದಲ್ಲಿ ವಂಚನೆಗಳಿಂದ ತಪ್ಪಿಸಿಕೊಳ್ಳಲು ಆಧಾರ್ ಪ್ರಾಮಾಣೀಕರಣ ಇತಿಹಾಸವನ್ನು ನಿಯಮಿತವಾಗಿ ಪರಿಶೀಲಿಸುವುದು ಒಳ್ಳೆಯ ಅಭ್ಯಾಸವಾಗಿದೆ. ಇದರಿಂದ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಂಡು ಸಂಭವನೀಯ ಮೋಸಗಳನ್ನು ಮುಂಚಿತವಾಗಿಯೇ ಪತ್ತೆಹಚ್ಚಬಹುದು.



