ಮದ್ಯದ ಅಮಲಿನಲ್ಲಿ ಅಟ್ಟಹಾಸ; ಹೋಮ್ ಗಾರ್ಡ್‌ನನ್ನು ಬಡಿದು ಕೊಂದ ಮೂವರು

ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಮದ್ಯಪಾನ ಮಾಡುತ್ತಿದ್ದವರನ್ನು ತಡೆಯಲು ಹೋದ ಹೋಮ್ ಗಾರ್ಡ್ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ (Tamil Nadu) ಅರಿಯಲೂರು (Ariyalur) ಜಿಲ್ಲೆಯಲ್ಲಿ ನಡೆದ ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಆಘಾತ ಮೂಡಿಸಿದೆ.

ಅಕ್ಟೋಬರ್ 29ರ ರಾತ್ರಿ ತಲವಾಯಿ ಪೊಲೀಸ್ ಠಾಣೆಯ ಕಾನಿಸ್ಟೇಬಲ್ ರಾಜಕಣ್ಣು (Rajakannu) ಮತ್ತು ಹೋಮ್ ಗಾರ್ಡ್ ವೆಂಕಟೇಶನ್ (Venkatesan) ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಖಾಸಗಿ ಸಿಮೆಂಟ್ ಕಾರ್ಖಾನೆಯೊಂದರ ಸಮೀಪ ಮೂವರು ವ್ಯಕ್ತಿಗಳು ಬಹಿರಂಗವಾಗಿ ಮದ್ಯಪಾನ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ.

ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸ್ ಸಿಬ್ಬಂದಿ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸದಂತೆ ಮೂವರಿಗೂ ಎಚ್ಚರಿಕೆ ನೀಡಿದ್ದಾರೆ. ಅಲ್ಲಿಂದ ತೆರಳುವಂತೆಯೂ ಸೂಚಿಸಿದ್ದಾರೆ. ಆದರೆ ಪೊಲೀಸರ ಮಾತಿಗೆ ಬೆಲೆ ನೀಡದ ಆರೋಪಿಗಳು ಮತ್ತೆ ಅದೇ ಕೃತ್ಯ ಮುಂದುವರಿಸಿದ್ದಾರೆ.

ಕಾನಿಸ್ಟೇಬಲ್ ಎದುರೇ ಹೋಮ್ ಗಾರ್ಡ್ ಮೇಲೆ ಹಲ್ಲೆ!

ಮರುದಿನ ಮುಂಜಾನೆ ವಿನಾಯಕ ದೇವಸ್ಥಾನದ ಸಮೀಪ ಅದೇ ಮೂವರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿರುವುದು ಕಂಡುಬಂದಿದೆ. ಗಸ್ತಿನಲ್ಲಿದ್ದ ರಾಜಕಣ್ಣು ಮತ್ತು ವೆಂಕಟೇಶನ್ ಅವರನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಏಕಾಏಕಿ ಆಕ್ರೋಶಗೊಂಡಿದ್ದಾರೆ.

ಮೊದಲು ಕಾನಿಸ್ಟೇಬಲ್ ರಾಜಕಣ್ಣು ಅವರನ್ನು ತಡೆದು ನಿಲ್ಲಿಸಿದ ಆರೋಪಿಗಳು, ಬಳಿಕ ಹೋಮ್ ಗಾರ್ಡ್ ವೆಂಕಟೇಶನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅವರ ತಲೆ ಮತ್ತು ಮುಖಕ್ಕೆ ಪದೇಪದೆ ಬಲವಾಗಿ ಹೊಡೆದಿದ್ದಾರೆ. ತೀವ್ರ ಹಲ್ಲೆಯಿಂದಾಗಿ ವೆಂಕಟೇಶನ್ ಸ್ಥಳದಲ್ಲೇ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದಿದ್ದಾರೆ.

ಬಳಿಕ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆ ತಿಳಿದ ಕೂಡಲೇ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಮಹಿಳೆ ಮೇಲೆ ಅತ್ಯಾಚಾರ: ಕಾನ್‌ಸ್ಟೆಬಲ್ ಅರೆಸ್ಟ್, ಐವರು ಸಸ್ಪೆಂಡ್

ಚಿಕಿತ್ಸೆ ನಡುವೆಯೇ ಹೋಮ್ ಗಾರ್ಡ್ ಸಾವು

ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶನ್ ಅವರನ್ನು ಆರಂಭದಲ್ಲಿ ಸೆಂದುರೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ತಿರುಚಿರಾಪಳ್ಳಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಂದ ತಂಜಾವೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶನ್ ಮೃತಪಟ್ಟಿದ್ದಾರೆ. ಕರ್ತವ್ಯದ ವೇಳೆ ನಡೆದ ಈ ದುರಂತ ಸಹೋದ್ಯೋಗಿಗಳಲ್ಲಿ ತೀವ್ರ ದುಃಖ ಮೂಡಿಸಿದೆ.

ಮೂವರು ಆರೋಪಿಗಳ ಬಂಧನ

ಪ್ರಕರಣದ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಸಿಲಪ್ಪನೂರು ಗ್ರಾಮದ ನಿವಾಸಿಗಳಾದ ಮಧಿವನನ್ (Madhivanan), ತಮರೈಕಣ್ಣನ್ (Thamaraikannan) ಮತ್ತು ಪರಿಧಿ (Parithi) ಎಂಬ ಮೂವರನ್ನು ಅಕ್ಟೋಬರ್ 31ರಂದು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ವಿವಿಧ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಘಟನೆಯ ಸಂಪೂರ್ಣ ವಿವರಗಳನ್ನು ಕಲೆಹಾಕುತ್ತಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.

English Summary▼

ಕರ್ನಾಟಕ ರಾಜ್ಯದ ಮೂಲೆಮೂಲೆಗಳ ಕನ್ನಡ ಸುದ್ದಿಗಳ ಜೊತೆಗೆ ದಿನದ ಪ್ರಮುಖ ಬೆಳವಣಿಗೆಗಳನ್ನು Kannada News Today ಮೂಲಕ ತಿಳಿಯಿರಿ.

TRENDING ARTICLES1 / 4
Show More

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories