Video: ಬ್ರೇಕಪ್ ಬಳಿಕ ರೊಚ್ಚಿಗೆದ್ದ ಪ್ರಿಯಕರ; ನಡುರಾತ್ರಿ ಮನೆಗೆ ನುಗ್ಗಿ ಬೆಂಕಿ ಇಟ್ಟ
ಎಂಟು ವರ್ಷಗಳ ಸಂಬಂಧ ಮುರಿದುಬಿದ್ದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಮಧ್ಯರಾತ್ರಿ ಮಾಜಿ ಪ್ರಿಯತಮೆಯ ಮನೆಗೆ ತೆರಳಿ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಸಿಸಿಟಿವಿ ದೃಶ್ಯಗಳು ಈಗ ವೈರಲ್ ಆಗಿವೆ.

- ಎಂಟು ವರ್ಷಗಳ ಪ್ರೀತಿಗೆ ಬ್ರೇಕಪ್ ಅಂತ್ಯ
- ಮಧ್ಯರಾತ್ರಿ ಮನೆ ಬಾಗಿಲಿಗೆ ಬೆಂಕಿ
- ಮಾಜಿ ಪ್ರಿಯಕರನನ್ನು ಬಂಧಿಸಿದ ಪೊಲೀಸರು
ಮುಂಬೈ: ಪ್ರೀತಿಯ ಸಂಬಂಧ ಮುರಿದುಬಿದ್ದ ಕಾರಣಕ್ಕೆ ವ್ಯಕ್ತಿಯೊಬ್ಬ ಎಷ್ಟು ಅಪಾಯಕಾರಿ ಕೃತ್ಯಕ್ಕೆ ಕೈಹಾಕಬಹುದು ಎಂಬುದಕ್ಕೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತನ್ನಿಂದ ದೂರವಾಗಲು ನಿರ್ಧರಿಸಿದ ಯುವತಿಯ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ವ್ಯಕ್ತಿ, ಆಕೆಯ ಮನೆಯ ಬಾಗಿಲಿಗೇ ಬೆಂಕಿ ಹಚ್ಚಿದ್ದಾನೆ.
ಈ ಘಟನೆ ನಡೆದಿರುವುದು ಡೊಂಬಿವ್ಲಿ (Dombivli) ಪ್ರದೇಶದಲ್ಲಿ. ಎಂಟು ವರ್ಷಗಳಿಂದ ಯುವತಿಯೊಂದಿಗೆ ಸಂಬಂಧ ಹೊಂದಿದ್ದ ದೀಪೇಶ್ ರಸ್ತೋಗಿ (Dipesh Rastogi) ಎಂಬಾತನಿಗೆ ಆಕೆ ಬ್ರೇಕಪ್ ಹೇಳಿದ್ದರಿಂದ ಆಕ್ರೋಶಗೊಂಡಿದ್ದಾನೆ. ಸಂಬಂಧ ಮುಂದುವರಿಸಲು ಯುವತಿ ನಿರಾಕರಿಸಿದ್ದರಿಂದ ಆಕೆಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದ ಎನ್ನಲಾಗಿದೆ.
ನವೆಂಬರ್ 16ರ ಮುಂಜಾನೆ ಸುಮಾರು 2.45ರ ವೇಳೆಗೆ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಯುವತಿಯ ನಿವಾಸದ ಬಳಿ ಬಂದಿದ್ದಾನೆ. ಬಳಿಕ ಮನೆಯ ಬಾಗಿಲಿನ ಸಮೀಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕೃತ್ಯ ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಆದರೆ, ಆ ಸಮಯದಲ್ಲಿ ಯುವತಿ ಒಬ್ಬಳೇ ಮನೆಯಲ್ಲಿರಲಿಲ್ಲ. ಆಕೆಯ ತಂದೆ-ತಾಯಿಯೂ ಮನೆಯೊಳಗೆ ಮಲಗಿದ್ದರು. ಬಾಗಿಲಿನ ಬಳಿ ಬೆಂಕಿ ಕಾಣಿಸಿಕೊಂಡ ತಕ್ಷಣ ಕುಟುಂಬದವರು ಎಚ್ಚೆತ್ತುಕೊಂಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣವೇ ಬೆಂಕಿ ನಂದಿಸಿದ್ದಾರೆ. ಹೀಗಾಗಿ ಬೆಂಕಿ ಮನೆಯೊಳಗೆ ವ್ಯಾಪಿಸುವುದು ತಪ್ಪಿದ್ದು, ಕುಟುಂಬದ ಯಾರಿಗೂ ಗಾಯಗಳಾಗಿಲ್ಲ.
ಘಟನೆ ಬಳಿಕ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯ ಭಾಗವಾಗಿ ಕಟ್ಟಡದ ಸಿಸಿಟಿವಿ (CCTV Footage) ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಬೆಂಕಿ ಹಚ್ಚಿದ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತ ಯುವತಿಯ ಮಾಜಿ ಪ್ರಿಯಕರ ದೀಪೇಶ್ ಎಂಬುದು ಗೊತ್ತಾಗಿದೆ.
ನಂತರ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ, ಇಷ್ಟೊಂದು ಗಂಭೀರ ಕೃತ್ಯ ಎಸಗಿದರೂ ಆರೋಪಿ ತನ್ನ ವರ್ತನೆಯ ಬಗ್ಗೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದೀಗ ಯುವತಿ ಮತ್ತು ಆಕೆಯ ಕುಟುಂಬದವರನ್ನು ಗುರಿಯಾಗಿಸಿಕೊಂಡೇ ಈ ಕೃತ್ಯ ಎಸಗಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ಮನೆಯ ಬಾಗಿಲಿಗೆ ಬೆಂಕಿ ಹಚ್ಚುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಬಂಧ ಮುರಿದುಬಿದ್ದ ಕಾರಣಕ್ಕೆ ಇಂತಹ ಕೃತ್ಯಕ್ಕೆ ಮುಂದಾದ ವ್ಯಕ್ತಿಯ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
🎥 CCTV Captures Accused Deepesh Rastogi Entering Girlfriend’s Building Before Setting Her House Ablaze In Dombivli
Reported by @AzmiJourno
#Dombivli #MaharashtraNews https://t.co/G7JDKcyqeJ
— Free Press Journal (@fpjindia) November 23, 2026



