ಲಾರಿ ಡಿಕ್ಕಿಗೆ ಕಾರು ಎರಡು ತುಂಡು, ಛಿದ್ರ ಛಿದ್ರ! ಪುಟ್ಟ ಮಕ್ಕಳು ಸೇರಿ 7 ಮಂದಿ ದುರ್ಮರಣ
ಗುಜರಾತ್ನ ಕಚ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸೇನಾ ಸಿಬ್ಬಂದಿಯ ಕುಟುಂಬಗಳಿಗೆ ಸೇರಿದ ಏಳು ಮಂದಿ ಮೃತಪಟ್ಟಿದ್ದಾರೆ. ರನ್ ಆಫ್ ಕಚ್ನಿಂದ ಭುಜ್ಗೆ ಮರಳುತ್ತಿದ್ದಾಗ ಕಾರಿಗೆ ಟ್ರೈಲರ್ ಲಾರಿ ಡಿಕ್ಕಿ ಹೊಡೆದಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.

- ಭೀಕರ ಅಪಘಾತಕ್ಕೆ ಕಾರು ಎರಡು ತುಂಡು
- ಇಬ್ಬರು ಪುಟ್ಟ ಮಕ್ಕಳು ಸೇರಿ ಏಳು ಮಂದಿ ಸಾವು
- ಮೃತರೆಲ್ಲರೂ ಉತ್ತರಾಖಂಡ ಮೂಲದವರು
ರಸ್ತೆಯಲ್ಲಿ ವೇಗವಾಗಿ ಸಾಗುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಟ್ರೈಲರ್ ಲಾರಿ ಡಿಕ್ಕಿ ಹೊಡೆದರೆ ಏನಾಗಬಹುದು ಎಂಬುದಕ್ಕೆ ಗುಜರಾತ್ನಲ್ಲಿ ನಡೆದ ಈ ದುರಂತವೇ ಸಾಕ್ಷಿ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಏಳು ಮಂದಿ ಬದುಕುಳಿಯಲಿಲ್ಲ. ಮೃತರಲ್ಲಿ ಪುಟ್ಟ ಮಕ್ಕಳು ಕೂಡ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.
ಗುಜರಾತ್ನ (Gujarat) ಕಚ್ ಜಿಲ್ಲೆಯ ಭುಜ್-ಖವಡಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರೈಲರ್ ಲಾರಿ ಕಾರಿಗೆ ಬಲವಾಗಿ ಅಪ್ಪಳಿಸಿದ ಪರಿಣಾಮ ವಾಹನ ಎರಡು ಭಾಗಗಳಾಗಿ ಒಡೆದುಹೋಗಿದೆ. ಕಾರಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಇಬ್ಬರು ಪುಟ್ಟ ಮಕ್ಕಳು ಸೇರಿ ಏಳು ಮಂದಿ ದುರ್ಮರಣ
ಮೃತರನ್ನು ರಿಂಕಿ ನಿತಿನ್ ಗುಸೈನ್ (35), ಅವರ ನಾಲ್ಕು ತಿಂಗಳ ಮಗಳು ವಾಮಿಕಾ, ಸೌರಭ್ ಸಿಂಗ್ ನೇಗಿ (30), ಅವರ ಪತ್ನಿ ಸವಿತಾ (30), ಮೂರು ತಿಂಗಳ ಮಗಳು ಸಿವಿಕಾ, ರಾಜೇಶ್ ರಾವತ್ (35) ಹಾಗೂ ಅವರ ಏಳು ವರ್ಷದ ಮಗಳು ರಕ್ಷಿತಾ ಎಂದು ಗುರುತಿಸಲಾಗಿದೆ.
ಈ ಎಲ್ಲರೂ ಉತ್ತರಾಖಂಡದ (Uttarakhand) ಗಢ್ವಾಲ್ ಪ್ರದೇಶದ ಮೂಲದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭುಜ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೇನಾ ಸಿಬ್ಬಂದಿಯ ಕುಟುಂಬದ ಸದಸ್ಯರಾಗಿದ್ದರು. ರನ್ ಆಫ್ ಕಚ್ (Rann of Kutch) ಪ್ರವಾಸ ಮುಗಿಸಿಕೊಂಡು ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೃತದೇಹ ಹೊರತೆಗೆಯಲು ಪೊಲೀಸರ ಹರಸಾಹಸ
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರಿಂದ ಅದರೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಹಲವು ಗಂಟೆಗಳ ಕಾಲ ಶ್ರಮಿಸಬೇಕಾಯಿತು.
ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ. ಒಂದೇ ಘಟನೆಯಲ್ಲಿ ಒಂದೇ ಕುಟುಂಬದ ಹಲವು ಸದಸ್ಯರನ್ನು ಕಳೆದುಕೊಂಡಿರುವುದು ಸಂಬಂಧಿಕರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.



