ಮದುವೆಯಾದ ಮರುದಿನವೇ ಮಗುವಿಗೆ ಜನ್ಮಕೊಟ್ಟ ವಧು! ಮದುವೆ ಗಂಡು ಶಾಕ್
ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದ ಘಟನೆ ಕುಟುಂಬದಲ್ಲಿ ಆತಂಕ ಮೂಡಿಸಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ನಡೆದ ಬೆಳವಣಿಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

- ಮದುವೆಯಾದ ಮರುದಿನವೇ ವಧುವಿಗೆ ಹೆರಿಗೆ
- ಶಿಶು ಮೃತಪಟ್ಟಿರುವುದಾಗಿ ವರದಿ
- ಪತ್ನಿ ವಿರುದ್ಧ ವರನಿಂದ ಪೊಲೀಸ್ ದೂರು
ಮದುವೆ ಎಂದರೆ ಎರಡು ಕುಟುಂಬಗಳ ಸಮ್ಮುಖದಲ್ಲಿ ಹೊಸ ಜೀವನ ಆರಂಭಿಸುವ ಸಂಭ್ರಮ. ಆದರೆ ತಮಿಳುನಾಡಿನ (Tamil Nadu) ತಿರುನೆಲ್ವೇಲಿ (Tirunelveli) ಸಮೀಪ ನಡೆದ ಮದುವೆಯೊಂದು ಮರುದಿನವೇ ಅನಿರೀಕ್ಷಿತ ಬೆಳವಣಿಗೆಯಿಂದ ವಿವಾದಕ್ಕೆ ಕಾರಣವಾಗಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧುವಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವರ ಹಾಗೂ ಆತನ ಕುಟುಂಬದವರು ಆಘಾತಕ್ಕೊಳಗಾಗಿದ್ದಾರೆ.
ತಿರುನೆಲ್ವೇಲಿ ಬಳಿಯ ಅರಿಯಕುಳಂ ನಿವಾಸಿ ವೆಂಕಟೇಶ್ (25) ವೃತ್ತಿಯಲ್ಲಿ ಕಟ್ಟಡ ಕಾರ್ಮಿಕ. ಈತನಿಗೆ ಏರಾನ್‌ಕುಡಿಪಾಲಂ ಪ್ರದೇಶದ ಪಿಚ್ಚಮ್ಮಾಳ್ ಎಂಬ ಯುವತಿಯೊಂದಿಗೆ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ವಿವಾಹ ನಿಶ್ಚಯವಾಗಿತ್ತು. ಜೂನ್ 29ರಂದು ನಿಶ್ಚಿತಾರ್ಥ ನಡೆದಿದ್ದು, ನವೆಂಬರ್ 13ರಂದು ಮದುವೆ ನೆರವೇರಿತ್ತು.
ಮದುವೆಯ ಸಂಭ್ರಮ ಮುಗಿದು ಹೊಸ ಜೀವನ ಆರಂಭಿಸುವ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಮರುದಿನ ಬೆಳಗಿನ ಜಾವ ಆಘಾತ ಎದುರಾಗಿದೆ. ಪಿಚ್ಚಮ್ಮಾಳ್‌ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದಲ್ಲದೆ ರಕ್ತಸ್ರಾವವೂ ಆರಂಭವಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವುದನ್ನು ಗಮನಿಸಿದ ವೆಂಕಟೇಶ್ ಮತ್ತು ಆತನ ಸಹೋದರಿ ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಇದೇ ವೇಳೆ ಮನೆಯ ಶೌಚಾಲಯದಲ್ಲಿ ಮೃತಪಟ್ಟ ಸ್ಥಿತಿಯಲ್ಲಿದ್ದ ನವಜಾತ ಶಿಶು ಪತ್ತೆಯಾಗಿದೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಆತಂಕಗೊಂಡ ಕುಟುಂಬದವರು ತಕ್ಷಣವೇ ವೆಂಕಟೇಶ್‌ಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಶುವಿನ ಮೃತದೇಹವನ್ನು ತಿರುನೆಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಪೊಲೀಸರ ಮೆಟ್ಟಿಲೇರಿದ ವಿವಾದ
ಮದುವೆಗೂ ಮುನ್ನವೇ ಪಿಚ್ಚಮ್ಮಾಳ್ ಗರ್ಭಿಣಿಯಾಗಿದ್ದ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಲಾಗಿದೆ ಎಂದು ಆರೋಪಿಸಿರುವ ವೆಂಕಟೇಶ್, ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮಿಂದ ಪ್ರಮುಖ ವಿಚಾರವೊಂದನ್ನು ಮರೆಮಾಚಿ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಸಂಬಂಧಪಟ್ಟ ಕಾನೂನು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪಿಚ್ಚಮ್ಮಾಳ್‌ಗೆ ಮದುವೆಗೂ ಮುನ್ನವೇ ಬೇರೊಬ್ಬ ಯುವಕನೊಂದಿಗೆ ಪ್ರೇಮ ಸಂಬಂಧವಿತ್ತು ಎನ್ನಲಾಗಿದೆ. ಆ ಸಂಬಂಧದಿಂದಲೇ ಗರ್ಭಿಣಿಯಾಗಿದ್ದರು ಎಂಬ ಆರೋಪವೂ ಕೇಳಿಬಂದಿದೆ.
ಇದಲ್ಲದೆ, ಆಕೆ ಸುಮಾರು ಏಳು ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದ್ದು, ಗರ್ಭಪಾತಕ್ಕಾಗಿ ಮಾತ್ರೆಗಳನ್ನು ಸೇವಿಸಿದ್ದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ ಈ ಕುರಿತು ವೈದ್ಯಕೀಯ ವರದಿ ಮತ್ತು ಪೊಲೀಸ್ ತನಿಖೆಯಿಂದಲೇ ನಿಖರ ಮಾಹಿತಿ ಹೊರಬರಬೇಕಿದೆ. ಸದ್ಯ ಪ್ರಕರಣದ ಎಲ್ಲ ಆಯಾಮಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.



