Credit Card: ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಇರಲಿ ಎಚ್ಚರ! ತಿಳಿಯದೆ ಬಳಸಿದರೆ ಸಾಲದ ಬಲೆ
Credit Card: ಇಂದು ಸಾಮಾನ್ಯರಿಗೂ ಲಭ್ಯವಾಗಿರುವ ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಸಿದರೆ ಲಾಭ, ತಿಳಿಯದೆ ಬಳಸಿದರೆ ಸಾಲದ ಭಾರ. APR, ಮಿನಿಮಮ್ ಡ್ಯೂ, ಕ್ರೆಡಿಟ್ ಲಿಮಿಟ್ ಮೊದಲಾದ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯ.

Credit Card: ಒಮ್ಮೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದ್ದ ಕ್ರೆಡಿಟ್ ಕಾರ್ಡ್ ಈಗ ಸಾಮಾನ್ಯ ಜನರ ಕೈಗೂ ತಲುಪಿದೆ. ಬ್ಯಾಂಕುಗಳು ಸುಲಭವಾಗಿ ಕಾರ್ಡ್ ನೀಡುತ್ತಿರುವುದರಿಂದ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಆದರೆ ನಿಯಮಗಳು ತಿಳಿಯದೆ ಬಳಸುವವರು ಅನಾವಶ್ಯಕವಾಗಿ ಸಾಲದ ಬಲೆಗೆ ಸಿಲುಕುತ್ತಿರುವುದು ಆರ್ಥಿಕ ತಜ್ಞರ ಎಚ್ಚರಿಕೆ.
ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚು ಗಮನಿಸಬೇಕಾದ ಪದವೇ APR (Annual Percentage Rate). ಬಿಲ್‌ನ ಗಡುವಿನೊಳಗೆ ಸಂಪೂರ್ಣವಾಗಿ ಪಾವತಿಸದಿದ್ದರೆ ಉಳಿದ ಮೊತ್ತದ ಮೇಲೆ ವಿಧಿಸುವ ವಾರ್ಷಿಕ ಬಡ್ಡಿದರವೇ APR.
ಸಾಮಾನ್ಯವಾಗಿ ಇದು 36ರಿಂದ 42 ಶೇಕಡಾ ವರೆಗೆ ಇರಬಹುದು. ಖರೀದಿ ಹಾಗೂ ಕ್ಯಾಶ್ ಅಡ್ವಾನ್ಸ್‌ಗೆ ಬೇರೆಬೇರೆ ಬಡ್ಡಿದರಗಳಿರಬಹುದು. ಆದ್ದರಿಂದ ಬಾಕಿ ಉಳಿಸುವ ಅಭ್ಯಾಸ ಬೆಲೆ ಕಟ್ಟಿಸುತ್ತದೆ.
ಇನ್ನೊಂದು ಮುಖ್ಯ ಅಂಶ ಮಿನಿಮಮ್ ಡ್ಯೂ. ಬಿಲ್ಲಿನಲ್ಲಿ ತೋರಿಸುವ ಕನಿಷ್ಠ 5 ಶೇಕಡಾ ಮೊತ್ತವನ್ನು ಪಾವತಿಸಿದರೆ ದಂಡ ತಪ್ಪಿಸಬಹುದು. ಆದರೆ ಉಳಿದ ಮೊತ್ತದ ಮೇಲೆ ಹೆಚ್ಚಿನ ಬಡ್ಡಿ ವಿಧಿಸಲಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಪೂರ್ಣ ಬಿಲ್ ಪಾವತಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: ಇಳಿಕೆ ನಿರೀಕ್ಷೆ ಮೂಡಿಸಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ! ಇಳಿಕೆಗೆ ಬ್ರೇಕ್, ಚಿನ್ನದ ದರ ಜಿಗಿತ
ಕ್ರೆಡಿಟ್ ಲಿಮಿಟ್ ಎಂದರೆ ಕಾರ್ಡ್ ಮೂಲಕ ಖರ್ಚು ಮಾಡಬಹುದಾದ ಗರಿಷ್ಠ ಮೊತ್ತ. ಇದು ನಿಮ್ಮ ಆದಾಯ ಹಾಗೂ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ನಿಗದಿಯಾಗುತ್ತದೆ. ಕೆಲ ಕಾರ್ಡ್‌ಗಳಿಗೆ ಯಾನ್ಯೂವಲ್ ಫೀ ವಿಧಿಸಲಾಗುತ್ತದೆ, ಕೆಲವು ಕಾರ್ಡ್‌ಗಳಲ್ಲಿ ನಿರ್ದಿಷ್ಟ ಷರತ್ತುಗಳ ಮೇರೆಗೆ ಅದು ಮನ್ನಾ ಆಗಬಹುದು.
ಪ್ರತಿ ತಿಂಗಳು 28ರಿಂದ 31 ದಿನಗಳ ಅವಧಿಯನ್ನು ಬಿಲ್ಲಿಂಗ್ ಸೈಕಲ್ ಎಂದು ಕರೆಯಲಾಗುತ್ತದೆ. ಸ್ಟೇಟ್‌ಮೆಂಟ್ ಬಂದ ದಿನದಿಂದ ಡ್ಯೂ ಡೇಟ್‌ವರೆಗೆ ಇರುವ ಅವಧಿಯೇ ಗ್ರೇಸ್ ಪೀರಿಯಡ್.
ಈ ಅವಧಿಯಲ್ಲಿ ಸಂಪೂರ್ಣ ಬಿಲ್ ಪಾವತಿಸಿದರೆ ಬಡ್ಡಿ ವಿಧಿಸಲಾಗುವುದಿಲ್ಲ. ಸರಿಯಾದ ಅರಿವು ಮತ್ತು ನಿಯಂತ್ರಿತ ಬಳಕೆ ಇದ್ದರೆ ಕ್ರೆಡಿಟ್ ಕಾರ್ಡ್ ನಿಮ್ಮ ಆರ್ಥಿಕ ಯೋಜನೆಗೆ ಸಹಾಯಕವಾಗಬಹುದು.



