Credit Card: ಕ್ರೆಡಿಟ್ ಕಾರ್ಡ್ ಬಿಲ್ ಹೆಚ್ಚು ಬಂದಿದೆಯಾ? ಅಪ್ಪಿ-ತಪ್ಪಿ ಇಎಂಐ ಆಯ್ಕೆ ಮಾತ್ರ ಮಾಡಬೇಡಿ
Credit Card EMI: ಕ್ರೆಡಿಟ್ ಕಾರ್ಡ್ ಬಿಲ್ ಹೆಚ್ಚು ಬಂದಾಗ ಹಲವರು EMI ಆಯ್ಕೆ ಮಾಡುತ್ತಾರೆ. ಆದರೆ EMI ಹಿಂದೆ ಬ್ಯಾಂಕ್ ವಸೂಲು ಮಾಡುವ ಹೆಚ್ಚುವರಿ ಬಡ್ಡಿ, ಪ್ರೊಸೆಸಿಂಗ್ ಶುಲ್ಕ ಮತ್ತು ಕ್ರೆಡಿಟ್ ಲಿಮಿಟ್ ಬ್ಲಾಕ್ ಆಗುವ ಸಂಗತಿ ಅನೇಕರಿಗೆ ಗೊತ್ತಿಲ್ಲ.

Credit Card EMI: ತಿಂಗಳ ಕೊನೆಯಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಮೆಸೇಜ್ ಬಂದಾಗ ಹಲವರಿಗೆ ಆತಂಕ ಶುರುವಾಗುತ್ತದೆ. ದೊಡ್ಡ ಮೊತ್ತದ ಬಿಲ್ ಒಮ್ಮೆಲೆ ಪಾವತಿಸಲು ಸಾಧ್ಯವಾಗದ ಕಾರಣ ಬಹುತೇಕ ಜನರು EMI (Equated Monthly Installment) ಆಯ್ಕೆ ಮಾಡುತ್ತಾರೆ. ತಿಂಗಳಿಗೆ ಕಡಿಮೆ ಮೊತ್ತ ಪಾವತಿಸಬೇಕೆಂದು ತೋರುವುದರಿಂದ ಅದು ಸುಲಭ ಮಾರ್ಗವೆಂದು ಅನಿಸುತ್ತದೆ.
ಆದರೆ ವಾಸ್ತವದಲ್ಲಿ EMI ಆಯ್ಕೆ ಮಾಡಿದ ಕ್ಷಣದಿಂದ ಅದು ಒಂದು ಸಣ್ಣ ಅವಧಿಯ ಸಾಲ (Short-term Loan) ಆಗಿ ಮಾರ್ಪಡುತ್ತದೆ. ಇದರ ಮೇಲೆ ಬ್ಯಾಂಕ್‌ಗಳು ಬಡ್ಡಿ ಹಾಗೂ ಪ್ರೊಸೆಸಿಂಗ್ ಶುಲ್ಕವನ್ನು ಸೇರಿಸಿ ಹೆಚ್ಚು ಹಣ ವಸೂಲು ಮಾಡುತ್ತವೆ.
EMI ಉಚಿತ ಸೇವೆಯಲ್ಲ
ಹೆಚ್ಚಿನವರು EMI ಅನ್ನು ಬ್ಯಾಂಕ್ ನೀಡುವ ಸಹಾಯವೆಂದು ಭಾವಿಸುತ್ತಾರೆ. ಆದರೆ ಇದು ಉಚಿತ ಸೌಲಭ್ಯವಲ್ಲ. ಉದಾಹರಣೆಗೆ 90,000 ರೂ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು EMIಗೆ ಬದಲಿಸಿದರೆ, ಬಡ್ಡಿ ಮತ್ತು ಶುಲ್ಕ ಸೇರಿ ಅದು ಸುಮಾರು 98,000 ರೂ.ವರೆಗೆ ಹೆಚ್ಚಾಗಬಹುದು.
ಇದರಿಂದ ಮೊದಲಿಗೆ ಕಡಿಮೆ ಎಂದು ಕಾಣುವ EMI ಕೊನೆಯಲ್ಲಿ ಹೆಚ್ಚು ಹಣ ಪಾವತಿಸಬೇಕಾದ ಪರಿಸ್ಥಿತಿ ತರುತ್ತದೆ.
ಕ್ರೆಡಿಟ್ ಲಿಮಿಟ್ ಬ್ಲಾಕ್ ಆಗುತ್ತದೆ
EMI ಮಾಡುವಾಗ ಮತ್ತೊಂದು ಮಹತ್ವದ ವಿಷಯ ಅನೇಕರಿಗೆ ತಿಳಿದಿಲ್ಲ. ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ 1 ಲಕ್ಷ ರೂ. ಇದ್ದು, ಅದರಲ್ಲಿ 80 ಸಾವಿರ ರೂ. EMIಗೆ ಬದಲಿಸಿದರೆ, ಆ ಮೊತ್ತ ನಿಮ್ಮ ಲಿಮಿಟ್‌ನಲ್ಲಿ ಬ್ಲಾಕ್ ಆಗುತ್ತದೆ.
ನೀವು ಪ್ರತಿಮಾಸ EMI ಪಾವತಿಸಿದಂತೆ ಆ ಲಿಮಿಟ್ ನಿಧಾನವಾಗಿ ಬಿಡುಗಡೆ ಆಗುತ್ತದೆ. ಅಷ್ಟರವರೆಗೆ ಕಾರ್ಡ್‌ನ ಸಂಪೂರ್ಣ ಲಿಮಿಟ್ ಬಳಸಲು ಸಾಧ್ಯವಾಗುವುದಿಲ್ಲ.
ಯಾವ ಸಂದರ್ಭಗಳಲ್ಲಿ EMI ಉಪಯೋಗ?
ಆಕಸ್ಮಿಕ ವೈದ್ಯಕೀಯ ವೆಚ್ಚಗಳು ಅಥವಾ ತುರ್ತು ಪ್ರಯಾಣಗಳಂತಹ ಪರಿಸ್ಥಿತಿಯಲ್ಲಿ EMI ಸಹಾಯವಾಗಬಹುದು. ಏಕೆಂದರೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸದೇ ಇದ್ದರೆ ವರ್ಷಕ್ಕೆ 35%ಕ್ಕಿಂತ ಹೆಚ್ಚು ದಂಡ ಹಾಗೂ ಕಮ್ಪೌಂಡ್ ಬಡ್ಡಿ ಬೀಳುವ ಸಾಧ್ಯತೆ ಇದೆ.
ಅಂತಹ ಸಂದರ್ಭಗಳಲ್ಲಿ EMI ಆಯ್ಕೆ ಮಾಡಿದರೆ ಹಣದ ಒತ್ತಡ ಸ್ವಲ್ಪ ಕಡಿಮೆಯಾಗಬಹುದು.
ಹಣ ಉಳಿಸಬೇಕಾದರೆ ಈ ವಿಧಾನ
ನಿಮ್ಮ ಬಳಿ ಹಣ ಇದ್ದರೆ ಯಾವಾಗಲೂ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಗಡುವಿನೊಳಗೆ ಸಂಪೂರ್ಣವಾಗಿ (Full Payment) ಪಾವತಿಸುವುದು ಉತ್ತಮ. ಇದರಿಂದ ಬಡ್ಡಿ ಕಟ್ಟಬೇಕಾಗುವುದಿಲ್ಲ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗುತ್ತದೆ.
ಕೆಲವೇ ದಿನಗಳಲ್ಲಿ ಹಣ ಬರುತ್ತದೆ ಎಂದು ಗೊತ್ತಿದ್ದರೂ EMI ಮಾಡುವುದು ಅನಗತ್ಯ ಬಡ್ಡಿ ಕಟ್ಟುವಂತಾಗುತ್ತದೆ. ಆದ್ದರಿಂದ EMI ಆಯ್ಕೆ ಮಾಡುವ ಮುನ್ನ ಬ್ಯಾಂಕ್ ಷರತ್ತುಗಳನ್ನು ಚೆನ್ನಾಗಿ ತಿಳಿದುಕೊಳ್ಳುವುದು ಮುಖ್ಯ.



