Flight Ticket: ವಿಮಾನ ಟಿಕೆಟ್ ಕುರಿತಾಗಿ ಹೊಸ ರೂಲ್ಸ್, 48 ಗಂಟೆ ಒಳಗೆ ಫ್ರೀ ಕ್ಯಾನ್ಸಲೇಶನ್
Flight Ticket: ವಿಮಾನ ಪ್ರಯಾಣಿಕರಿಗೆ ಡಿಜಿಸಿಎ ಮಹತ್ವದ ಸಡಿಲಿಕೆ ನೀಡಿದ್ದು, 48 ಗಂಟೆಯೊಳಗೆ ಟಿಕೆಟ್ ರದ್ದು ಮಾಡಿದರೆ ಶುಲ್ಕವಿಲ್ಲ. 14 ದಿನಗಳಲ್ಲಿ ರಿಫಂಡ್ ಕಡ್ಡಾಯ. ಹೆಸರು ತಿದ್ದುಪಡಿ ಕೂಡ ಉಚಿತವಾಗಿ ಅನುಮತಿ.

Flight Ticket: ವಿಮಾನ ಪ್ರಯಾಣಿಕರಿಗೆ ನಿರಾಳ ಸುದ್ದಿ. ಟಿಕೆಟ್ ರದ್ದು ಮತ್ತು ರಿಫಂಡ್ ಕುರಿತಂತೆ ಡಿಜಿಸಿಎ (DGCA) ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇತ್ತೀಚಿನ ವಿಮಾನ ರದ್ದತಿ ಮತ್ತು ವಿಳಂಬ ಪ್ರಕರಣಗಳ ಹಿನ್ನೆಲೆ, ಪ್ರಯಾಣಿಕರು ಹಣ ವಾಪಸ್ ಪಡೆಯಲು ಎದುರಿಸಿದ ತೊಂದರೆಗಳನ್ನು ಗಮನಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದೀಗ ಟಿಕೆಟ್ ಬುಕ್ ಮಾಡಿದ ನಂತರ 48 ಗಂಟೆಯೊಳಗೆ ಕ್ಯಾನ್ಸಲ್ ಮಾಡಿದರೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲು ಅವಕಾಶವಿಲ್ಲ. ಇದು ಪ್ರಯಾಣ ಯೋಜನೆ ಬದಲಾಯಿಸಬೇಕಾದ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ.
14 ದಿನಗಳಲ್ಲಿ ರಿಫಂಡ್ ಕಡ್ಡಾಯ
ಹೊಸ ನಿಯಮಗಳ ಪ್ರಕಾರ, ವಿಮಾನಯಾನ ಸಂಸ್ಥೆಗಳು ರಿಫಂಡ್ ಪ್ರಕ್ರಿಯೆಯನ್ನು ಗರಿಷ್ಠ 14 ದಿನಗಳೊಳಗೆ ಪೂರ್ಣಗೊಳಿಸಬೇಕು. ತಮ್ಮದೇ ವೆಬ್‌ಸೈಟ್ ಅಥವಾ ಆಪ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳಿಗೆ ಈ ನಿಯಮಗಳು ಅನ್ವಯಿಸುತ್ತವೆ.
ಮತ್ತೊಂದೆಡೆ, ಟ್ರಾವೆಲ್ ಏಜೆಂಟ್ ಅಥವಾ ತೃತೀಯ ಪಾರ್ಟಿ ಪೋರ್ಟಲ್ ಮೂಲಕ ಟಿಕೆಟ್ ಖರೀದಿಸಿದರೆ ಕೂಡ 14 ಕೆಲಸದ ದಿನಗಳಲ್ಲಿ ಹಣ ಹಿಂತಿರುಗಿಸಬೇಕೆಂದು ಸ್ಪಷ್ಟ ಸೂಚನೆ ನೀಡಲಾಗಿದೆ.
ಹೆಸರು ತಿದ್ದುಪಡಿ ಅವಕಾಶ
ಟಿಕೆಟ್ ಬುಕ್ ಮಾಡಿದ 24 ಗಂಟೆಯೊಳಗೆ ಹೆಸರುಗಳಲ್ಲಿ ಸಾಮಾನ್ಯ ತಪ್ಪುಗಳಿದ್ದರೆ, ಯಾವುದೇ ಶುಲ್ಕವಿಲ್ಲದೆ ಸರಿಪಡಿಸಬಹುದು. ಇದರಿಂದ ಸ್ಪೆಲ್ಲಿಂಗ್ ತಪ್ಪುಗಳಿಂದ ಉಂಟಾಗುವ ಅನಗತ್ಯ ಒತ್ತಡ ತಪ್ಪಲಿದೆ.
ಈ ಬದಲಾವಣೆಗಳ ಹಿಂದೆ ಕಾರಣ ಏನು?
ಇತ್ತೀಚಿನ ವಿಮಾನ ರದ್ದತಿ ಪ್ರಕರಣಗಳು ಸಾವಿರಾರು ಪ್ರಯಾಣಿಕರಿಗೆ ಸಂಕಷ್ಟ ತಂದಿದ್ದವು. ಹಣ ಮರಳಿ ಪಡೆಯಲು ವಿಳಂಬವಾದ ಕಾರಣ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪ್ರಯಾಣಿಕರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಡಿಜಿಸಿಎ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ.
ಹೊಸ ನಿಯಮಗಳು ಜಾರಿಗೆ ಬಂದಿರುವುದರಿಂದ, ವಿಮಾನ ಪ್ರಯಾಣಿಕರಿಗೆ ಈಗ ಹೆಚ್ಚು ಸ್ಪಷ್ಟತೆ ಮತ್ತು ಭರವಸೆ ದೊರೆಯಲಿದೆ. ಯೋಜನೆ ಬದಲಾದರೂ ಆರ್ಥಿಕ ನಷ್ಟದ ಭಯ ಕಡಿಮೆಯಾಗಲಿದೆ.



