ಬಿಗ್ ರಿಲೀಫ್, ಗ್ಯಾಸ್ ಸಿಲಿಂಡರ್ ಸಂಕಷ್ಟಕ್ಕೆ ಬ್ರೇಕ್! ಮಂಗಳೂರು ಬಂದರಿಗೆ ಬಂದ ಹಡಗು

LPG Supply India: ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಭಾರತಕ್ಕೆ LPG ಹಾಗೂ ಕಚ್ಚಾ ತೈಲ ಸರಬರಾಜಿನಲ್ಲಿ ಮಹತ್ವದ ನೆರವು ದೊರೆತಿದೆ. ಅಮೆರಿಕ ಹಾಗೂ ರಷ್ಯಾದಿಂದ ಬಂದ ಇಂಧನ ಹಡಗುಗಳು ಮಂಗಳೂರು ಬಂದರಿಗೆ ತಲುಪಿದ್ದು, ಸರಬರಾಜಿಗೆ ಭದ್ರತೆ ನೀಡಿವೆ.

LPG Supply India: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದ ಇಂಧನ ಸರಬರಾಜು ಬಗ್ಗೆ ಆತಂಕ ಹೆಚ್ಚಾಗಿದ್ದ ಸಮಯದಲ್ಲಿ ಭಾರತಕ್ಕೆ ಮಹತ್ವದ ಸುದ್ದಿ ಲಭ್ಯವಾಗಿದೆ. ಅಮೆರಿಕದಿಂದ LPG ಹೊತ್ತೊಯ್ಯುತ್ತಿದ್ದ “ಪೈಕ್ಸಿಸ್ ಪಯನಿಯರ್” ಹಡಗು ನ್ಯೂ ಮಂಗಳೂರು ಬಂದರಿಗೆ ತಲುಪಿದ್ದು, ದೇಶದ ಇಂಧನ ಭದ್ರತೆಗೆ ನೆರವಾಗಿದೆ.

ಫೆಬ್ರವರಿ 14ರಂದು ಅಮೆರಿಕದ ಟೆಕ್ಸಾಸ್‌ನ ನೆದರ್ಲ್ಯಾಂಡ್ಸ್ ಪೋರ್ಟ್‌ನಿಂದ ಹೊರಟ ಈ ಹಡಗು ಸುಮಾರು 16,714 ಮೆಟ್ರಿಕ್ ಟನ್ LPG ಅನ್ನು ಭಾರತಕ್ಕೆ ತರಲಾಗಿದೆ. ಈ ಸರಕುಗಳನ್ನು ಮಂಗಳೂರು ಬಂದರಿನಲ್ಲಿ ಏಜಿಸ್ ಲಾಜಿಸ್ಟಿಕ್ಸ್ ಸಂಸ್ಥೆ ಮೂಲಕ ಅನ್‌ಲೋಡ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ರಷ್ಯಾದಿಂದ ಬಂದ ಕಚ್ಚಾ ತೈಲ

ಇದಕ್ಕಿಂತ ಒಂದು ದಿನ ಮುಂಚೆಯೇ ರಷ್ಯಾದಿಂದ ಬಂದ “ಆಕ್ವಾ ಟೈಟಾನ್” ಟ್ಯಾಂಕರ್ ಮಂಗಳೂರು ಕರಾವಳಿಗೆ ತಲುಪಿದೆ. ಸುಮಾರು 7.7 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಹೊತ್ತೊಯ್ಯುತ್ತಿದ್ದ ಈ ಹಡಗು ಮೊದಲು ಚೀನಾಕ್ಕೆ ಹೋಗಬೇಕಾಗಿತ್ತು. ಆದರೆ ನಂತರ ಮಾರ್ಗ ಬದಲಿಸಿ ಭಾರತಕ್ಕೆ ತಲುಪಿರುವುದು ಗಮನಾರ್ಹವಾಗಿದೆ.

ಈ ಕಚ್ಚಾ ತೈಲವನ್ನು ಸಮುದ್ರದಡಿ ಇರುವ ಪೈಪ್‌ಲೈನ್ ಮೂಲಕ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಘಟಕಕ್ಕೆ ಸಾಗಿಸಲಾಗುತ್ತಿದೆ. ಇದರಿಂದ ದೇಶದ ಇಂಧನ ಉತ್ಪಾದನೆಗೆ ಸಹಾಯಕವಾಗಲಿದೆ.

ಪಶ್ಚಿಮ ಏಷ್ಯಾ ಅವಲಂಬನೆ ಕಡಿಮೆ ಮಾಡಲು ಪ್ರಯತ್ನ

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾದ ಕಾರಣ ಕೆಲವೊಮ್ಮೆ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತದೆ. ಅದಕ್ಕಾಗಿ ಭಾರತ ಈಗ ಅಮೆರಿಕ, ರಷ್ಯಾ ಸೇರಿದಂತೆ ವಿವಿಧ ದೇಶಗಳಿಂದ ಇಂಧನ ಪಡೆಯುವ ತಂತ್ರವನ್ನು ಬಲಪಡಿಸುತ್ತಿದೆ.

ಇತ್ತೀಚಿನ ತಿಂಗಳಲ್ಲಿ ಶಿವಾಲಿಕ್ ಮತ್ತು ನಂದಾ ದೇವಿ ಹಡಗುಗಳೂ ದೇಶಕ್ಕೆ ಇಂಧನ ತಂದುಕೊಟ್ಟಿವೆ. ಈ ಕ್ರಮಗಳಿಂದ ಭಾರತ ತನ್ನ ಇಂಧನ ಸರಬರಾಜು ವ್ಯವಸ್ಥೆಯನ್ನು ವೈವಿಧ್ಯಗೊಳಿಸುವತ್ತ ಗಮನ ಹರಿಸಿದೆ.

ಮಂಗಳೂರು ಬಂದರಿನ ಮಹತ್ವ ಹೆಚ್ಚಳ

ಇತ್ತೀಚಿನ ಬೆಳವಣಿಗೆಗಳಿಂದ ಮಂಗಳೂರು ಬಂದರು ಇಂಧನ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗುತ್ತಿದೆ. ಇಲ್ಲಿ ದೇಶದಲ್ಲೇ ಅತಿದೊಡ್ಡ ಭೂಗರ್ಭ LPG ಸಂಗ್ರಹ ಸೌಲಭ್ಯವಿದ್ದು, ಸುಮಾರು 80,000 ಮೆಟ್ರಿಕ್ ಟನ್ LPG ಸಂಗ್ರಹ ಸಾಮರ್ಥ್ಯ ಹೊಂದಿದೆ.

ಈ ಭೂಗರ್ಭ ಸಂಗ್ರಹ ವ್ಯವಸ್ಥೆ ಸಮುದ್ರ ಮಟ್ಟಕ್ಕಿಂತ ಸುಮಾರು 225 ಮೀಟರ್ ಕೆಳಗೆ ನಿರ್ಮಿಸಲಾಗಿದೆ. ಇದರಿಂದ ಇಂಧನ ಭದ್ರತೆ ಮತ್ತು ದೀರ್ಘಾವಧಿ ಸರಬರಾಜಿಗೆ ಹೆಚ್ಚಿನ ನೆರವು ಸಿಗಲಿದೆ.

Related Stories